ADVERTISEMENT

ಕಟ್ಟಡ ಮಾಲೀಕರಿಗೆ ಲಿಂಬಾವಳಿ ಬೆದರಿಕೆ: ಎಎಪಿ ನಾಯಕ ಆರೋಪ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 20:23 IST
Last Updated 16 ಆಗಸ್ಟ್ 2021, 20:23 IST
ಮೋಹನ್‌ ದಾಸರಿ
ಮೋಹನ್‌ ದಾಸರಿ   

ಬೆಂಗಳೂರು: ‘ಆಮ್‌ ಆದ್ಮಿ ಪಕ್ಷದ ಕಚೇರಿಗೆ ಕಟ್ಟಡ ಬಾಡಿಗೆ ನೀಡಿದ್ದಕ್ಕಾಗಿ ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ಕಟ್ಟಡದ ಮಾಲೀಕರಿಗೆ ಬೆದರಿಕೆ ಒಡ್ಡಿದ್ದಾರೆ’ ಎಂದು ಎಎಪಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ ಸೋಮವಾರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹದೇವಪುರ ಕ್ಷೇತ್ರದ ಎಎಪಿ ಅಧ್ಯಕ್ಷ ಅಶೋಕ್‌ ಮೃತ್ಯುಂಜಯ, ಕಸವನಹಳ್ಳಿ ವೃತ್ತದಲ್ಲಿ ಕಟ್ಟಡವೊಂದನ್ನು ಲೀಸ್‌ಗೆ ಪಡೆದು, ಅಲ್ಲಿ ಬೆಳ್ಳಂದೂರು ವಾರ್ಡ್‌ ಕಚೇರಿಯನ್ನು ಭಾನುವಾರ ಆರಂಭಿಸಿದ್ದರು. ವಿಷಯ ತಿಳಿದೊಡನೆಯೇ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ, ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ. ಕಚೇರಿ ಖಾಲಿ ಮಾಡಿಸದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿ
ದ್ದಾರೆ. ನಾವು ಕಚೇರಿ ಶುರುಮಾಡಿದರೆ ಶಾಸಕರಿಗೇಕೆ ಭಯ. ಅವರೇಕೆಹತಾಶರಾಗಿದ್ದಾರೆ. ಅವರ ನಡವಳಿಕೆ ಖಂಡನಾರ್ಹ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದರು.

‘ನಮಗೆ ಜನರ ಹಿತ ಮುಖ್ಯ. ಅದೇ ನಮ್ಮ ಪಕ್ಷದ ಧ್ಯೇಯ. ನಾವು ದ್ವೇಷ ರಾಜಕಾರಣಕ್ಕೆ ಮುಂದಾಗುವುದಿಲ್ಲ. ಅದರಲ್ಲಿ ಆಸಕ್ತಿಯೂ ಇಲ್ಲ. ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಬಿಜೆಪಿಯವರು ಭಾವಿಸಬಾರದು. ಗೂಂಡಾಗಿರಿ, ಬಿಜೆಪಿಯ ಸಂಸ್ಕೃತಿ. ಶಾಸಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ನಮಗೆ ಕಿರುಕುಳ ನೀಡುತ್ತಿದ್ದಾರೆ. ಅವರ ಪ್ರಜಾಪ್ರಭುತ್ವ ವಿರೋಧಿ ನಡೆಗೆ ಪ್ರಜಾಪ್ರಭುತ್ವದ ಮಾರ್ಗದಲ್ಲಿಯೇ ತಕ್ಕ ಪಾಠ ಕಲಿಸುವುದು ನಮಗೆ ತಿಳಿದಿದೆ’ ಎಂದು ಹೇಳಿದರು.

ADVERTISEMENT

ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ, ‘ಕ್ಷೇತ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕೆರೆ ಒತ್ತುವರಿ ವಿರುದ್ಧ ನಾವು ದನಿ ಎತ್ತುತ್ತಿದ್ದೇವೆ. ಇದರಿಂದ ಕಂಗೆಟ್ಟಿರುವ ಶಾಸಕರು ತಾವು ಮಾಡಿರುವ ಅಕ್ರಮಗಳೆಲ್ಲಾ ಬಯಲಾಗಬಹುದು ಎಂಬ ಭಯದಿಂದ ಬೆದರಿಕೆ ಹಾಕಿದ್ದಾರೆ. ಅವರ ಗೂಂಡಾಗಿರಿ ಮುಂದುವರಿದರೆ ಅದನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಕಚೇರಿ ಆರಂಭಿಸುವುದು ಪ್ರಜಾಪ್ರಭುತ್ವ ನಮಗೆ ನೀಡಿರುವ ಹಕ್ಕು. ಇದನ್ನು ಕಿತ್ತುಕೊಳ್ಳುವ ದುಸ್ಸಾಹಸದಿಂದ ಅವರು ಹಿಂದೆ ಸರಿಯಬೇಕು’ ಎಂದು ತಿಳಿಸಿದರು.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಶಾಸಕರನ್ನು ಸಂಪರ್ಕಿಸಲಾಯಿತು. ಕರೆ ಸ್ವೀಕರಿಸಿದ ಅವರ ಆಪ್ತ ಸಹಾಯಕ, ‘ಸಾಹೇಬರು ಇಲ್ಲ. ಈ ಬಗ್ಗೆ ಏನೂ ಗೊತ್ತಿಲ್ಲ‘ ಎಂದಷ್ಟೇ ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.