
ಬೆಂಗಳೂರು: ರಾಜ್ಯದಲ್ಲಿ ಅಂಗಾಂಗಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಸಾವಿರಾರು ಮಂದಿ ಅಂಗಾಂಗಕ್ಕಾಗಿ ಎದುರು ನೋಡುತ್ತಿದ್ದಾರೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಅಪರಿಚಿತ ವ್ಯಕ್ತಿಗೆ ಜೀವಂತ ವ್ಯಕ್ತಿಯೊಬ್ಬರು ಮೂತ್ರಪಿಂಡವನ್ನು ದಾನ ಮಾಡಿದ್ದಾರೆ.
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯೆಡಾ.ಥಂಕಮ್ ಎಸ್. ಅವರು ಹೈಕೋರ್ಟ್ ಅನುಮತಿ ಪಡೆದು ಮೂತ್ರಪಿಂಡವನ್ನು ದಾನ ಮಾಡಿದ್ದಾರೆ. 2014ರಲ್ಲಿ ಮರಣೋತ್ತರ ಅಂಗಾಂಗ ದಾನದ ಪ್ರತಿಜ್ಞೆ ಕೈಗೊಂಡಿದ್ದ ಅವರು, ಬಳಿಕ ಜೀವಂತ ದಾನಿಯಾಗಲು ಬಯಸಿದರು. ಆದರೆ, ಇದಕ್ಕೆ ಕಾನೂನು ತೊಡಕುಗಳು ಇದ್ದ ಕಾರಣ, ಹತ್ತು ವರ್ಷಗಳು ಕಾನೂನು ಹೋರಾಟ ನಡೆಸಿದ್ದರು. ಅಂತಿಮವಾಗಿ ಹೈಕೋರ್ಟ್ ಅನುಮತಿ ನೀಡಿದ್ದರಿಂದ ಅವರು 56 ವರ್ಷದ ಅಪರಿಚಿತ ಮಹಿಳೆಗೆ ತಮ್ಮ ಮೂತ್ರಪಿಂಡವನ್ನು ದಾನವಾಗಿ ನೀಡಿದ್ದಾರೆ. ಈ ಮೂಲಕ ಅವರು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಿ, ಮಾದರಿಯಾಗಿದ್ದಾರೆ. ಅವರ
ಕಾರ್ಯಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಮಾನವ ಅಂಗಾಂಗ ದಾನ ಕಸಿ ಕಾಯ್ದೆ 1994 ಅಂಗಾಂಗ ದಾನಕ್ಕೆ ಉತ್ತೇಜನ ನೀಡುತ್ತಿದೆ. ರಾಜ್ಯದಲ್ಲಿ 2007ರಿಂದ ‘ಜೀವಸಾರ್ಥಕತೆ’ ಸಂಸ್ಥೆಯಅಡಿ ಅಂಗಾಂಗ ದಾನ ಹಾಗೂ ಅಂಗಾಂಗ ಕಸಿಗೆ ಉತ್ತೇಜನ ನೀಡಲಾಗುತ್ತಿದೆ. ಮೂತ್ರಪಿಂಡ ವೈಫಲ್ಯದಂತಹ ಪ್ರಕರಣಗಳಲ್ಲಿ ಕುಟುಂಬಸ್ಥರು ಅಥವಾ
ಸಂಬಂಧಿಗಳು ಅಂಗಾಂಗ ದಾನಕ್ಕೆ ಮುಂದೆ ಬಂದು, ಅವರ ಅಂಗಾಂಗ ಹೊಂದಾಣಿಕೆಯಾದಲ್ಲಿ ಕಸಿ ಮಾಡಲಾಗುತ್ತದೆ. ಇಲ್ಲವಾದಲ್ಲಿ, ಜೀವಸಾರ್ಥಕತೆಯಡಿ ಮೃತ ದಾನಿಯಿಂದ ಪಡೆದ
ಅಂಗಾಂಗಕ್ಕೆ ಎದುರು ನೋಡಬೇಕಾಗುತ್ತದೆ. ಅದು ಹೊಂದಾಣಿಕೆಯಾದಲ್ಲಿ ಮಾತ್ರ ಕಸಿ ಸಾಧ್ಯವಾಗಲಿದೆ.
ಯಶಸ್ವಿ ಕಸಿ: ಅಂಗಾಂಗ ದಾನ ಪ್ರಕ್ರಿಯೆಯು ಹಣಕಾಸಿನ ವ್ಯವಹಾರಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಕಾರಣಕ್ಕೆ, ಸಂಬಂಧಿಗಳು ಹಾಗೂ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳಿಂದ ಮಾತ್ರ ಅಂಗಾಂಗವನ್ನು ದಾನವಾಗಿ ಪಡೆಯಲಾಗುತ್ತಿದೆ. ಈ ಸಂಬಂಧ ನಿರ್ಬಂಧಗಳನ್ನೂ ವಿಧಿಸಲಾಗಿದೆ. 59 ವರ್ಷದ ಥಂಕಮ್ ಅವರು ಮಣಿಪಾಲ್ ಆಸ್ಪತ್ರೆಯಲ್ಲಿಭ್ರೂಣ ಔಷಧ ವಿಭಾಗದ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೀವಂತ ದಾನಿಯಾಗುವ ಅವರ ನಿರ್ಧಾರಕ್ಕೆ ಕುಟುಂಬಸ್ಥರಿಂದಲೂ ಆರಂಭಿಕ ದಿನಗಳಲ್ಲಿ ವಿರೋಧವಿತ್ತು. ಬಳಿಕ ಅವರ ಮನವೊಲಿಸಿದರೂ, ಆಸ್ಪತ್ರೆಯ ಆಡಳಿತ ಮಂಡಳಿ ಅನುಮತಿ ನೀಡಿರಲಿಲ್ಲ. ಇದರಿಂದಾಗಿ 2023ರಲ್ಲಿ ಅವರ ಮೂತ್ರಪಿಂಡ 24 ವರ್ಷದ ವ್ಯಕ್ತಿಗೆ ಹೊಂದಾಣಿಕೆಯಾದರೂ ಕಸಿ ಸಾಧ್ಯವಾಗಿರಲಿಲ್ಲ.
2025ರ ಜೂನ್‌ನಲ್ಲಿ ಅನುಮತಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಡಿಸೆಂಬರ್‌ನಲ್ಲಿ ದಾನಕ್ಕೆ ಹೈಕೋರ್ಟ್ ಅನುಮತಿ ನೀಡಿತ್ತು. ಮೂತ್ರಪಿಂಡ ಸ್ವೀಕರಿಸಲು ಅರ್ಹ ರಾಗಿರುವ ಐದು ಮಂದಿಯನ್ನು ಐದು ವಾರದೊಳಗೆ ಗುರುತಿಸಬೇಕು ಎಂದು ಕೋರ್ಟ್ ಆದೇಶಿಸಿತ್ತು. 56 ವರ್ಷದ ಅಪರಿಚಿತ ಮಹಿಳೆಗೆ ಮೂತ್ರಪಿಂಡ ಹೊಂದಾಣಿಕೆಯಾಗಿದ್ದು, ಫೆ.2ರಂದು ಕಸಿಗೆ ಅನುಮತಿ ನೀಡಲಾಗಿತ್ತು. ಫೆ.10ರಂದು ಯಶಸ್ವಿಯಾಗಿ ಕಸಿ ಪ್ರಕ್ರಿಯೆ ನಡೆಸಲಾಗಿದೆ. ವೈದ್ಯೆಯೂ ಈಗ ಚೇತರಿಸಿಕೊಂಡಿದ್ದಾರೆ.
‘ಥಂಕಮ್ ಅವರು ಸದ್ಯ ವಿಶ್ರಾಂತಿಯಲ್ಲಿದ್ದು, ಶೀಘ್ರದಲ್ಲಿಯೇ ವೈದ್ಯಕೀಯ ಸೇವೆಗೆ ಮರಳಲಿದ್ದಾರೆ’ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ‘ಪ್ರಜಾವಾಣಿ’ಗೆ ತಿಳಿಸಿದೆ.
ಮೂತ್ರಪಿಂಡ ದಾನ ಸುರಕ್ಷಿತವಾಗಿದ್ದು, ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕು. ಆದ್ದರಿಂದಲೇ ನಾನು ಕಾನೂನು ಹೋರಾಟ ನಡೆಸಿ, ಅಪರಿಚಿತ ವ್ಯಕ್ತಿಗೆ ಮೂತ್ರಪಿಂಡ ದಾನ ಮಾಡಿದೆಡಾ.ಥಂಕಮ್ ಎಸ್. ಮೂತ್ರಪಿಂಡ ದಾನಿ
ಮೂತ್ರಪಿಂಡಕ್ಕೆ ಬೇಡಿಕೆ
ರಾಜ್ಯದಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಅಂಗಾಂಗಕ್ಕಾಗಿ ಎದುರು ನೋಡುತ್ತಿದ್ದಾರೆ. ಅವರಲ್ಲಿ ಮೂತ್ರಪಿಂಡಕ್ಕೆ ಎದುರು ನೋಡುತ್ತಿರುವವರ ಸಂಖ್ಯೆಯೇ ನಾಲ್ಕು ಸಾವಿರಕ್ಕೂ ಅಧಿಕವಿದೆ. ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜೀವಸಾರ್ಥಕತೆ ಸಂಸ್ಥೆಯು ಅಂಗಾಂಗಗಳ ಕೊರತೆ ನೀಗಿಸಲು ಶ್ರಮಿಸುತ್ತಿದೆ. ದಾನಿಗಳ ಕೊರತೆ ಹಾಗೂ ಹೊಂದಾಣಿಕೆಯಾಗುವ ಅಂಗಾಂಗಗಳು ಸಿಗದಿರುವುದು ಕಸಿ ಪ್ರಕ್ರಿಯೆಗೆ ತೊಡಕಾಗಿದೆ. ರಾಜ್ಯದಲ್ಲಿ ಕಳೆದ ವರ್ಷ 198 ಮಂದಿಯಿಂದ 564 ಅಂಗಾಂಗಗಳನ್ನು ದಾನವಾಗಿ ಪಡೆಯಲಾಗಿತ್ತು.
ಡಾ.ಥಂಕಮ್ ಎಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.