ADVERTISEMENT

ದಿನವಿಡೀ ಗಸ್ತು, ಹೊರಗೆ ಬಂದವರಿಗೆ ಲಾಠಿ ಏಟು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 20:43 IST
Last Updated 26 ಮಾರ್ಚ್ 2020, 20:43 IST
ಬೆಂಗಳೂರಿನಲ್ಲಿ ಪೊಲೀಸರು ನೀಡುವ ಪಾಸ್‌‌ಗಾಗಿ ಮುಗಿ ಬಿದ್ದ ಜನರು
ಬೆಂಗಳೂರಿನಲ್ಲಿ ಪೊಲೀಸರು ನೀಡುವ ಪಾಸ್‌‌ಗಾಗಿ ಮುಗಿ ಬಿದ್ದ ಜನರು   

ಬೆಂಗಳೂರು: ನಗರಕ್ಕೆ ಸಂಪರ್ಕ ಕಲ್ಪಿಸುವ ಹೊರವಲಯದ 12 ಪ್ರಮುಖ ರಸ್ತೆಗಳು ಬಂದ್. ಒಳ ಪ್ರವೇಶಿಸಲು ಯತ್ನಿಸಿದ ವಾಹನಗಳ ಜಪ್ತಿ. ಅನಗತ್ಯವಾಗಿ ಬೈಕ್ ಹಾಗೂ ಕಾರಿನಲ್ಲಿ ಓಡಾಡುತ್ತಿದ್ದವರಿಗೆ ಲಾಠಿ ಬೀಸಿದ ಪೊಲೀಸರು.

ಇದು ನಗರದಲ್ಲಿ ಗುರುವಾರ ಕಂಡುಬಂದ ದೃಶ್ಯಗಳು. ನಿಷೇಧಾಜ್ಞೆ ಜಾರಿಯಾದಾಗಿನಿಂದ ಪೊಲೀಸರು ನಗರದಾದ್ಯಂತ ಗಸ್ತು ತಿರುಗುತ್ತಿದ್ದಾರೆ.ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಮೊಕ್ಕಾಂ ಹೂಡಿದ್ದಾರೆ.ನಗರದ ಸುತ್ತಲಿನ ಎಲ್ಲ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ಅಗತ್ಯ ವಸ್ತುಗಳ ಸಾಗಣೆ ವಾಹನ ಹೊರತುಪಡಿಸಿ ಉಳಿದ ವಾಹನಗಳಿಗೆ ನಗರದೊಳಗೆ ಪ್ರವೇಶ ನೀಡಲಾಗುತ್ತಿಲ್ಲ.

ಕೆಲ ವಾಹನಗಳನ್ನು ವಾಪಸು ಕಳುಹಿಸಲಾಗುತ್ತಿದ್ದು, ನಿಷೇಧಾಜ್ಞೆ ಪ್ರಶ್ನಿಸಿ ವಾಗ್ವಾದಕ್ಕೆ ಇಳಿಯುವ ಚಾಲಕರ ವಾಹನಗಳನ್ನು ಜಪ್ತಿ ಮಾಡಿ ನೋಟಿಸ್ ನೀಡಲಾಗುತ್ತಿದೆ. ಚೆಕ್‌ಪೋಸ್ಟ್ ಅಕ್ಕ–ಪಕ್ಕದ ಖಾಲಿ ಜಾಗದಲ್ಲಿ ಜಪ್ತಿ ಮಾಡಿದ ವಾಹನಗಳೇ ಇದೀಗ ಕಾಣಸಿಗುತ್ತಿವೆ. ಕೆಂಗೇರಿ, ದೇವನಹಳ್ಳಿ, ವಿಜಯನಗರ ಸೇರಿ ಹಲವೆಡೆ ಗುರುವಾರ ಅನಗತ್ಯವಾಗಿ ಓಡಾಡುತ್ತಿದ್ದ ಯುವಕರಿಗೆ ಪೊಲೀಸರು ಲಾಠಿ ಬೀಸಿದರು. ವಿಜಯನಗರದಲ್ಲಿ ಒಬ್ಬಟ್ಟು ತರಲೆಂದು ಕಾರಿನಲ್ಲಿ ಅಜ್ಜಿ ಮನೆಗೆ ಹೋಗಿ ವಾಪಸು ಹೊರಟಿದ್ದ ಯುವಕನ ಕಥೆ ಕೇಳಿ ಪೊಲೀಸರೂ ನಗುವಂತಾಯಿತು.

ADVERTISEMENT

ಬಟ್ಟೆಯನ್ನೇ ಮಾಸ್ಕ್ ಮಾಡಿಸಿದ ಪೊಲೀಸರು: ನಿಷೇಧಾಜ್ಞೆ ನಡುವೆಯೂ ಮಾಸ್ಕ್ ಧರಿಸದೇ ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.

ಹಲಸೂರು ಸಂಚಾರ ಠಾಣೆಯ ಪಿಎಸ್‌ಐ ಕವಿತಾ, ಮಾಸ್ಕ್ ಹಾಕದೇ ತಿರುಗಾಡುತ್ತಿದ್ದ ಯುವಕರನ್ನು ತಡೆದು ವಿಚಾರಿಸಿ, ಅವರ ಬಟ್ಟೆಯನ್ನೇ ಬಿಚ್ಚಿಸಿ ಮುಖಕ್ಕೆ ಕಟ್ಟಿ ಕಳುಹಿಸಿದರು.

ಸಾಮಾಜಿಕ ಅಂತರಕ್ಕೆ ವೃತ್ತ: ದೇವನಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯ ‘ದೇವನಹಳ್ಳಿ ಟೌನ್ ಹಾಲು ಉತ್ಪಾದಕರ ಸಹಕಾರ ಸಂಘ’ದ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವೃತ್ತವನ್ನು ನಿರ್ಮಿಸಲಾಗಿದೆ.ನಸುಕಿನಲ್ಲಿ ಹಾಲು ನೀಡಲು ಬರುವ ರೈತರು, ವೃತ್ತದಲ್ಲೇ ನಿಂತು ಸರದಿ ಸಾಲಿನಲ್ಲಿ ಬಂದು ಹಾಲು ನೀಡುತ್ತಿದ್ದಾರೆ. ನಗರದ ಬಹುತೇಕ ಕಡೆಗಳಲ್ಲಿ ಸಾಮಾಜಿಕ ಅಂತರಕ್ಕೆ ವೃತ ನಿಯಮವನ್ನು ಅನುಸರಿಸಲಾಗುತ್ತಿದೆ.

ಪೊಲೀಸರಿಂದ ಜಾಗೃತಿ: ಯಶವಂತ ಪುರ ಠಾಣೆ ಪೊಲೀಸರು, ತಮ್ಮ ವ್ಯಾಪ್ತಿಯಲ್ಲಿರುವ ನಿರ್ಗತಿಕರನ್ನು ಗುರುತಿಸಿ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಿದರು. ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ಕಿಟ್ ಸಹ ವಿತರಿಸಲಾಯಿತು.

ಮಾಂಸ ಖರೀದಿಗೆ ಮುಗಿಬಿದ್ದ ಜನ: ವೈರಾಣು ಹರಡುವಿಕೆ ಭೀತಿ ನಡುವೆಯೂ ನಗರದಲ್ಲಿ ಗುರುವಾರ ಮಾಂಸ ಖರೀದಿಗೆ ಜನ ಮುಗಿಬಿದ್ದರು.ಯುಗಾದಿ ಹಬ್ಬದ ಮರುದಿನದ ಹೊಸತೊಡಕು (ಮಾಂಸದೂಟ) ಆಚರಣೆಗಾಗಿ ಜನರು ಬೆಳಿಗ್ಗೆಯಿಂದಲೇ ಮಾಂಸ ಖರೀದಿಗಾಗಿ ಅಂಗಡಿಗಳ ಮುಂದೆ ಸರತಿಯಲ್ಲಿ ನಿಂತಿದ್ದರು. ಪೊಲೀಸರು, ಪ್ರತಿ ಅಂಗಡಿ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವೃತ್ತ ಹಾಕಿದರು. ನಂತರ, ಜನರೆಲ್ಲರೂ ಅದೇ ವೃತ್ತದೊಳಗೆ ನಿಂತು ಮಾಂಸ ಖರೀದಿ ಮಾಡಿದರು. ಮುಖಕ್ಕೆ ಮಾಸ್ಕ್ ಧರಿಸುವಂತೆಯೂ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.