ADVERTISEMENT

ಬೆಂಗಳೂರು | ಲಾಕಪ್‌ಡೆತ್‌: ನಾಲ್ವರು ಕಾನ್‌ಸ್ಟೆಬಲ್‌ಗಳಿಗೆ ಜೈಲು

2016ರಲ್ಲಿ ನಡೆದಿದ್ದ ಪ್ರಕರಣ: ಸಿಐಡಿ ವಿಶೇಷ ನ್ಯಾಯಾಲಯದ ಆದೇಶ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2024, 15:39 IST
Last Updated 27 ನವೆಂಬರ್ 2024, 15:39 IST
<div class="paragraphs"><p>ಜೈಲು (ಪ್ರಾಧಿನಿಧಿಕ ಚಿತ್ರ)</p></div>

ಜೈಲು (ಪ್ರಾಧಿನಿಧಿಕ ಚಿತ್ರ)

   

– ಐಸ್ಟಾಕ್ ಚಿತ್ರ

ಬೆಂಗಳೂರು: ಎಂಟು ವರ್ಷದ ಹಿಂದೆ ಜೀವನ್‌ ಭಿಮಾನಗರ ಪೊಲೀಸ್‌ ಠಾಣೆಯಲ್ಲಿ ನಡೆದಿದ್ದ ಮಹೇಂದ್ರ ರಾಥೋಡ್‌ ಅವರ ಲಾಕಪ್‌ಡೆತ್‌ ಪ್ರಕರಣದಲ್ಲಿ ನಾಲ್ವರು ಪೊಲೀಸ್‌ ಕಾನ್‌ಸ್ಟೆಬಲ್‌ಗಳಿಗೆ 51ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ (ಸಿ.ಐ.ಡಿ ವಿಶೇಷ ನ್ಯಾಯಾಲಯ) ಏಳು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.

ADVERTISEMENT

ಹೆಡ್‌ ಕಾನ್‌ಸ್ಟೆಬಲ್‌ ಏಜಾಜ್‌ ಖಾನ್ (ಹಾಲಿ ಕೆಲಸ ಹಲಸೂರು ಸಂಚಾರ ಠಾಣೆ), ಕಾನ್‌ಸ್ಟೆಬಲ್‌ಗಳಾದ ಕೇಶವಮೂರ್ತಿ (ರಾಮಮೂರ್ತಿ ನಗರ ಪೊಲೀಸ್‌ ಠಾಣೆ), ಮೋಹನ್‌ ರಾಮ್‌ (ಇಂದಿರಾನಗರ ಸಂಚಾರ ಠಾಣೆ), ಸಿದ್ದಪ್ಪ ಬೊಮ್ಮನಹಳ್ಳಿ (ಇಂದಿರಾನಗರ ಪೊಲೀಸ್‌ ಠಾಣೆ) ಅವರು ಶಿಕ್ಷೆಗೆ ಒಳಗಾದವರು.

ಲಾಕಪ್‌ಡೆತ್‌ ನಡೆದಾಗ ನಾಲ್ವರೂ ಜೀವನ್‌ ಭಿಮಾನಗರ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

2016ರಲ್ಲಿ ಜೀವನ್‌ ಭಿಮಾ ನಗರ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಕಳ್ಳತನ ನಡೆಸಿದ ಅನುಮಾನದ ಮೇಲೆ ಮಹೇಂದ್ರ ರಾಥೋಡ್‌ ಅವರನ್ನು ನಾಲ್ವರು ಕಾನ್‌ಸ್ಟೆಬಲ್‌ಗಳು ಠಾಣೆಗೆ ಕರೆ ತಂದಿದ್ದರು. ವಿಚಾರಣೆ ವೇಳೆ ದೈಹಿಕ ಹಲ್ಲೆ ನಡೆಸಿದ್ದರಿಂದ ಪೊಲೀಸ್ ವಶದಲ್ಲಿದ್ದಾಗಲೇ ಮಹೇಂದ್ರ ರಾಥೋಡ್‌ ಅವರು ಮೃತಪಟ್ಟಿದ್ದರು. ನಂತರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ತನಿಖಾಧಿಕಾರಿ, ಅಂದಿನ ಡಿವೈಎಸ್‌ಪಿ ಬಿ.ಎಸ್‌.ಶ್ರೀನಿವಾಸ್ ಅವರು ಪ್ರಕರಣದ ತನಿಖೆ ನಡೆಸಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಕೊಲೆ ಮಾಡಿರುವ ಆರೋಪ ವಿಚಾರಣೆಯಲ್ಲಿ ಸಾಬೀತಾಗಿದ್ದು, ಈ ಅಪರಾಧಕ್ಕಾಗಿ ಏಳು ವರ್ಷ ಶಿಕ್ಷೆ ಹಾಗೂ ₹30 ಸಾವಿರ ದಂಡ, ಉದ್ದೇಶಪೂರ್ವಕ ಹಲ್ಲೆ ನಡೆಸಿರುವುದಕ್ಕಾಗಿ ಅಪರಾಧಕ್ಕಾಗಿ ಐದು ವರ್ಷ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ ಸಿಐಡಿ ಪ್ರಕರಣಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಸರ್ಕಾರಿ ವಕೀಲರಾದ ಕಷ್ಣವೇಣಿ ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ್ದರು.

ಮಹೇಂದ್ರ ರಾಥೋಡ್‌ ಅವರಿಗೆ ಲಾಠಿ ಹಾಗೂ ರೋಲರ್‌ಗಳಿಂದ ಹೊಡೆದ ಪರಿಣಾಮ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ದೂರು ನೀಡಲಾಗಿತ್ತು. ಆ ದೂರು ಆಧರಿಸಿ ತನಿಖೆ ನಡೆಸಲಾಗಿತ್ತು.

ದೇಹದ ಒಳಗಡೆ ಪ್ರಮುಖ ಅಂಗಗಳಿಗೆ ರಕ್ತದ ಮೂಲಕ ಪೂರೈಕೆಯಾಗುವ ಆಮ್ಲಜನಕದ ಕೊರತೆಯ ಕಾರಣದಿಂದ ಸಾವು ಸಂಭವಿಸಿದೆ ಎಂಬುದಾಗಿ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ವರದಿ ನೀಡಿದ್ದರು. ತನಿಖಾ ಕಾಲದಲ್ಲಿ ಸಂಗ್ರಹಿಸಿದ ದಾಖಲೆಗಳು ಹಾಗೂ ವೈದ್ಯಕೀಯ ವರದಿಯಿಂದ ಆರೋಪಿಗಳು ಅಪರಾಧ ಎಸಗಿರುವುದು ಸಾಬೀತಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.