ADVERTISEMENT

ಎಸ್‌.ಎಂ. ಕೃಷ್ಣ ಬೆಂಬಲ ಕೋರಿದ ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 16:13 IST
Last Updated 8 ಏಪ್ರಿಲ್ 2024, 16:13 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಜೆಪಿ ನಾಯಕ ಎಸ್‌.ಎಂ. ಕೃಷ್ಣ ಅವರನ್ನು ಸೋಮವಾರ ಸಂಜೆ ಭೇಟಿ ಮಾಡಿ, ಬೆಂಬಲ ಕೋರಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ಬಿಜೆಪಿ ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಎಸ್‌. ಪುಟ್ಟರಾಜು, ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಇಂಡುವಾಳು ಸಚ್ಚಿದಾನಂದ ಮತ್ತು ಉಮೇಶ್‌ ಅವರೊಂದಿಗೆ ಸದಾಶಿವನಗರದಲ್ಲಿರುವ ಕೃಷ್ಣ ಮನೆಗೆ ಭೇಟಿ ನೀಡಿದ ಕುಮಾರಸ್ವಾಮಿ, ಕೆಲಕಾಲ ಚರ್ಚೆ ನಡೆಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು), ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್‌ ನಾಯಕರ ನಿಯೋಗವು ಕಳೆದ ವಾರ ಕೃಷ್ಣ ಅವರನ್ನು ಭೇಟಿ ಮಾಡಿತ್ತು. ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಈ ನಿಯೋಗ ಮನವಿ ಮಾಡಿತ್ತು. 

ADVERTISEMENT

ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ‘ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿ ಕೆಲಸ ಮಾಡಿರುವ ಕೃಷ್ಣ ಅವರು ನಮ್ಮ ತಂದೆಯವರಿಗಿಂತಲೂ ಹಿರಿಯರು. ನಾಮಪತ್ರ ಸಲ್ಲಿಸುವ ಮುನ್ನವೇ ಅವರ ಆಶೀರ್ವಾದ ಪಡೆಯಬೇಕಿತ್ತು. ಈಗ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ’ ಎಂದರು.

‘ನಾನು ರಾಜಕೀಯ ಪ್ರವೇಶಿಸಿದಾಗ ಕೃಷ್ಣ ಅವರು ಆಶೀರ್ವಾದ ಮಾಡಿದ್ದರು. ಚರ್ಚೆಯ ಸಂದರ್ಭದಲ್ಲಿ ಆ ಸಂಗತಿಯನ್ನು ಕೃಷ್ಣ ಅವರೇ ನೆನಪಿಸಿಕೊಂಡರು. ಈಗಲೂ ಆಶೀರ್ವದಿಸಿ, ನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡಿ ಎಂದಿದ್ದಾರೆ. ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿರುವುದು ಸಂತೋಷ ಉಂಟು ಮಾಡಿದೆ’ ಎಂದು ಹೇಳಿದರು.

‘ಎಲ್ಲೂ ಕಾಣೆಯಾಗಿಲ್ಲ’: ‘ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅವರಿಗೆ ಉತ್ತರ ನೀಡಲು ನಾನು ಸಮರ್ಥನಿದ್ದೇನೆ. ನಾನು ಎಲ್ಲೂ ಕಾಣೆಯಾಗಿಲ್ಲ. ನಾನು ಇಲ್ಲೇ ಇದ್ದೇನೆ. ಈ ರೀತಿ ಅಪಪ್ರಚಾರ ಮಾಡಿ ಚುನಾವಣೆಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಅವರು ಈ ರೀತಿ ಪರೋಕ್ಷವಾಗಿ ಸೆಣಸುವ ಬದಲು ನೇರವಾಗಿ ಚುನಾವಣೆ ಮಾಡಲಿ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.