ADVERTISEMENT

ಅನುದಾನಿತ ಸಂಸ್ಥೆ ನೌಕರರೂ ‘ಲೋಕಾ’ ವ್ಯಾಪ್ತಿಗೆ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 16:02 IST
Last Updated 21 ಅಕ್ಟೋಬರ್ 2025, 16:02 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆ ಸಿಬ್ಬಂದಿ ವಿರುದ್ಧವೂ ಲೋಕಾಯುಕ್ತರು ತನಿಖೆ ನಡೆಸಬಹುದು’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ತಮ್ಮ ವಿರುದ್ಧದ ಲೋಕಾಯುಕ್ತ ವರದಿ ಆಧರಿಸಿ ಕೈಗೊಳ್ಳಲಾಗಿದ್ದ ತನಿಖೆಯನ್ನು ಪ್ರಶ್ನಿಸಿ ನೆಲಮಂಗಲದ ಬೈರಶೆಟ್ಟಿಹಳ್ಳಿಯ ಶ್ರೀ ಬಾಲಾಂಜನೇಯ ಪ್ರೌಢಶಾಲೆ ಗ್ರಂಥಪಾಲಕ ಹಾಗೂ ಲಿಪಿಕ ಬಿ.ಲಕ್ಷ್ಮೀನಾರಾಯಣ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಡಿ.ಕೆ.ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಸರ್ಕಾರದಿಂದ ಅನುದಾನ ಪಡೆಯುವ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯನ್ನು ಕೆಲವು ಉದ್ದೇಶಗಳಿಗಾಗಿ ಸರ್ಕಾರಿ ಸಿಬ್ಬಂದಿಯ ಭಾಗವೆಂದೇ ಪರಿಗಣಿಸಿರುವ ಹೈಕೋರ್ಟ್‌ನ ಪೂರ್ವ ನಿದರ್ಶನಗಳಿವೆ. ಅವರ ವೇತನ, ಭತ್ಯೆ ಮತ್ತು ಸೇವಾ ಷರತ್ತುಗಳನ್ನು ಸರ್ಕಾರವೇ ನಿಯಂತ್ರಿಸುತ್ತದೆ. ಹೀಗಾಗಿ, ಅರ್ಜಿದಾರರ ವಿರುದ್ಧವೂ ಲೋಕಾಯುಕ್ತ ತನಿಖೆ ನಡೆಸಬಹುದು’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

‘ಲೋಕಾಯುಕ್ತ ಕಾಯ್ದೆಯ ಸೆಕ್ಷನ್‌ 12(3)ರಡಿ ನೀಡಿರುವ ವರದಿ ಮತ್ತು ಸಿಸಿಎ ನಿಯಮ 14ಎ ಅಡಿ ತನಿಖೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶಗಳು ಸರಿ ಇದೆ’ ಎಂದು ನ್ಯಾಯಪೀಠ ವಿವರಿಸಿದೆ.

ADVERTISEMENT

ಪ್ರಕರಣವೇನು?: ‘ಶಾಲಾ ಆಡಳಿತ ಮಂಡಳಿಯಿಂದ ಅಗತ್ಯ ಅನುಮತಿ ಪಡೆಯದೆ ಬಿ.ಲಕ್ಷ್ಮೀನಾರಾಯಣ ಇತರ ನಾಲ್ವರು 2004 ಮತ್ತು 2005ರಲ್ಲಿ ವಾಜರಹಳ್ಳಿ ಹಾಗೂ ನೆಲಮಂಗಲ ವ್ಯಾಪ್ತಿಯಲ್ಲಿ ಜಮೀನು ಖರೀದಿ ಮಾಡಿದ್ದಾರೆ’ ಎಂದು 2013ರಲ್ಲಿ ಲೋಕಾಯುಕ್ತದಲ್ಲಿ ದೂರು ಸಲ್ಲಿಕೆಯಾಗಿತ್ತು.

‘ಲಕ್ಷ್ಮೀನಾರಾಯಣ ಅವರು ನಿಯಮಾನುಸಾರ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ’ ಎಂದು ದೂರುದಾರರು ಆರೋಪಿಸಿದ್ದರು.

ಲೋಕಾಯುಕ್ತವು ಪ್ರಾಥಮಿಕ ತನಿಖೆ ನಡೆಸಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿ ಆಧರಿಸಿ ಸರ್ಕಾರ ಸಿಸಿಎ ನಿಯಮಗಳಡಿ ಪೂರ್ಣ ಪ್ರಮಾಣದ ತನಿಖೆ ನಡೆಸಲು ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿಕೊಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.