ADVERTISEMENT

ಲಂಚ ಪ್ರಕರಣ: ಮಹಿಳಾ ಪಿಎಸ್‌ಐ ಸಹಿತ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಮೇ 2023, 7:30 IST
Last Updated 25 ಮೇ 2023, 7:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿರುವ ಕೌಟುಂಬಿಕ ಕಲಹದ ಆರೋಪಿಯೊಬ್ಬರ ಬಂಧನ ಮತ್ತು ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಲು ₹ 15,000 ಲಂಚ ಪಡೆದ ಆರೋಪದ ಮೇಲೆ ಶಿವಾಜಿನಗರ ಮಹಿಳಾ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸವಿತಾ ಕನಮಡಿ ಮತ್ತು  ಕಾನ್‌ಸ್ಟೆಬಲ್‌ಗಳ ಶೋಭಾ ತಳವಾರ, ಸೋಮಶೇಖರ್‌ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ವ್ಯಕ್ತಿಯೊಬ್ಬರ ವಿರುದ್ಧ ಅವರ ಪತ್ನಿ ಶಿವಾಜಿನಗರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಆರೋಪಿತರಿಗೆ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ನ್ಯಾಯಾಲಯದ ಆದೇಶದೊಂದಿಗೆ ಸವಿತಾ ಅವರನ್ನು ಮಂಗಳವಾರ ಭೇಟಿ ಮಾಡಿದ್ದ ಆರೋಪಿಯು, ಜಾಮೀನಿನಲ್ಲಿರುವ ಷರತ್ತುಗಳನ್ನು ಪೂರೈಸುವ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದರು.

‘ನ್ಯಾಯಾಲಯದ ಆದೇಶದ ಪ್ರತಿಯನ್ನು ಎಸೆದಿದ್ದ ಪಿಎಸ್‌ಐ, ಬಂಧನ ಮತ್ತು ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಲು ₹ 20,000 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆರೋಪಿಯು ಚೌಕಾಸಿ ನಡೆಸಿದಾಗ ₹ 15,000 ಕೊಡುವಂತೆ ಕೇಳಿದ್ದರು. ಮಂಗಳವಾರವೇ ಮುಂಗಡವಾಗಿ ₹ 10,000 ಪಡೆದಿದ್ದರು. ಬುಧವಾರ ₹ 5,000 ತಲುಪಿಸುವಂತೆ ಸೂಚಿಸಿದ್ದರು’ ಎಂದು ಲೋಕಾಯುಕ್ತದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮಹಿಳಾ ಪಿಎಸ್‌ಐ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಪ್ರಕರಣ ಎದುರಿಸುತ್ತಿರುವ ಆರೋಪಿಯ ಅಣ್ಣ ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ಸಂಜೆ ಶಿವಾಜಿನಗರ ಮಹಿಳಾ ಪೊಲೀಸ್‌ ಠಾಣೆಗೆ ಹೋದ ದೂರುದಾರರು ₹ 5,000 ಲಂಚದ ಹಣವನ್ನು ಪಿಎಸ್‌ಐಗೆ ತಲುಪಿಸಿದರು. ತಕ್ಷಣ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು, ಲಂಚದ ಹಣದೊಂದಿಗೆ ಸವಿತಾ ಅವರನ್ನು ಬಂಧಿಸಿದರು ಎಂದು ಮಾಹಿತಿ ನೀಡಿದ್ದಾರೆ.

ಕಾನ್‌ಸ್ಟೆಬಲ್‌ ಗಿರೀಶ್ ಕೂಡ ಆರೋಪಿಯಾಗಿದ್ದು, ಕಾರ್ಯಾಚರಣೆ ವೇಳೆ ಅವರು ಸ್ಥಳದಲ್ಲಿ ಇರಲಿಲ್ಲ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.