ಕರ್ನಾಟಕ ಲೋಕಾಯುಕ್ತ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಕಂದಾಯ ಭವನದಲ್ಲಿ ಇರುವ ಬೆಂಗಳೂರು ದಕ್ಷಿಣ ತಾಲ್ಲೂಕು ವಿಶೇಷ ತಹಶೀಲ್ದಾರ್ ವರ್ಷಾ ಒಡೆಯರ್ ಅವರ ಕಚೇರಿಯ ಮೆಲೆ ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು, ‘ಲಭ್ಯವಿಲ್ಲ’ ಎಂದು ಹಿಂಬರಹ ನೀಡಲಾಗಿದ್ದ ಮೂಲ ದಾಖಲೆ ಪತ್ರಗಳನ್ನು ಪತ್ತೆ ಮಾಡಿದ್ದಾರೆ.
‘ರೇಖಾ ಎಂಬುವವರು ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಗ್ರಾಮದ ಸರ್ವೆ ಸಂಖ್ಯೆ 121/8ರಲ್ಲಿ 2 ಎಕರೆ 20 ಗುಂಟೆ ಜಮೀನನ್ನು ಖರೀದಿಸಿದ್ದರು. ಅದರ ಖಾತೆ ವರ್ಗಾವಣೆಗೆ 2023ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಖಾತೆ ವರ್ಗಾವಣೆ ಆಗಿರಲಿಲ್ಲ. ಈ ಹಿಂದಿನ ತಹಶೀಲ್ದಾರರು ಖಾತೆ ವರ್ಗಾವಣೆ ಮಾಡುವಂತೆ ಷರಾ ಬರೆದಿದ್ದರು. ಆದರೆ ಈಗಿನ ವರ್ಷಾ ಅವರು ಖಾತೆ ವರ್ಗಾವಣೆಗೆ ಅನುಮೋದನೆ ನೀಡಿರಲಿಲ್ಲ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
‘ಖಾತೆ ವರ್ಗಾವಣೆಗೆ ವರ್ಷಾ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ರೇಖಾ ಅವರು ಅದಕ್ಕೆ ಒಪ್ಪದಿದ್ದಾಗ, ‘ಜಮೀನಿಗೆ ಸಂಬಂಧಿಸಿದ ಮೂಲ ದಾಖಲೆ ಪತ್ರಗಳು ಲಭ್ಯವಿಲ್ಲ’ ಎಂದು ಹಿಂಬರಹ ನೀಡಿದ್ದರು. ಆದರೆ. ಅದೇ ಸರ್ವೆ ನಂಬರ್‌ನ ಇತರ ಜಮೀನುಗಳನ್ನು ಖರೀದಿಸಿದ್ದವರಿಗೆ ಖಾತೆ ವರ್ಗಾವಣೆ ಮಾಡಿಕೊಟ್ಟಿದ್ದರು. ಈ ಬಗ್ಗೆ ರೇಖಾ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು’ ಎಂದು ವಿವರಿಸಿದ್ದಾರೆ.
‘ಲೋಕಾಯುಕ್ತರ ಸೂಚನೆ ಮೇರೆಗೆ ಡಿವೈಎಸ್‌ಪಿ ಗಿರೀಶ್ ಅವರು ವಿಶೇಷ ತಹಶೀಲ್ದಾರ್ ಅವರ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ರೂಪಿಸಿದ್ದರು. ಲೋಕಾಯುಕ್ತ ಪೊಲೀಸರು ಕಚೇರಿಗೆ ತೆರಳಿದಾಗ, ಕಚೇರಿಯ ಹೊರಗಿದ್ದ ವರ್ಷಾ ಅವರು ಅಲ್ಲಿಂದಲೇ ಪರಾರಿಯಾದರು. ಜಿಲ್ಲಾಧಿಕಾರಿ ಅವರು ಕರೆ ಮಾಡಿದರೂ ಕಚೇರಿಗೆ ಬರಲಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.
‘ಮೊದಲಿಗೆ ರೆಕಾರ್ಡ್ ರೂಂನಲ್ಲಿ ಶೋಧ ನಡೆಸಲಾಗಿದ್ದು, ದೂರುದಾರರ ಜಮೀನಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಸಿಗಲಿಲ್ಲ. ಆದರೆ, ವಿಶೇಷ ತಹಶೀಲ್ದಾರ್ ಅವರ ಟೇಬಲನ್‌ನ ಲಾಕರ್‌ನಲ್ಲಿ ಆ ದಾಖಲೆಗಳು ಇದ್ದವು. ಈಗ ವರ್ಷಾ ಅವರ ಬಂಧನಕ್ಕೆ ಕಾರ್ಯಾಚರಣೆ ರೂಪಿಸಲಾಗಿದೆ’ ಎಂದು ತಿಳಿಸಿದ್ದಾರೆ.
2022ರಲ್ಲಿ ಕನಕಪುರ ತಹಶೀಲ್ದಾರ್ ಆಗಿದ್ದ ವರ್ಷಾ ಅವರು ₹5 ಲಕ್ಷ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.