ಪರಾರಿ
ಬೆಂಗಳೂರು: ಅಪರಾಧ ಪ್ರಕರಣವೊಂದರ ಆರೋಪಿಗಳಿಗೆ ಠಾಣಾ ಜಾಮೀನು ಮಂಜೂರು ಮಾಡಲು ₹ 5,000 ಲಂಚ ಪಡೆದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ನಿಂಗರಾಜೇಗೌಡ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ. ₹ 50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‌ಐ ಶಿವರಾಜ್ ತಲೆಮರೆಸಿಕೊಂಡಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕರಿಓಬನಹಳ್ಳಿಯ ನಿವೇಶನವೊಂದರಲ್ಲಿ ಏಪ್ರಿಲ್ 7ರಂದು ಗಲಾಟೆ ನಡೆದಿತ್ತು. ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದ ಆರೋಪದಡಿ ಜಯರಾಮ್, ಹರೀಶ್, ಸತೀಶ್ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ಮೂರನೇ ಆರೋಪಿಯಾಗಿರುವ ಸತೀಶ್ ತನ್ನನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ಮತ್ತು ಹೆಡ್ ಕಾನ್‌ಸ್ಟೆಬಲ್ ಬಳಿ ಮನವಿ ಮಾಡಿದ್ದರು. ಠಾಣಾ ಜಾಮೀನು ಮಂಜೂರು ಮಾಡಲು ಪಿಎಸ್ಐಗೆ ₹ 50,000 ಮತ್ತು ಹೆಡ್ ಕಾನ್‌ಸ್ಟೆಬಲ್‌ಗೆ ₹ 5,000 ಲಂಚ ಕೊಡುವಂತೆ ಇಬ್ಬರೂ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸತೀಶ್, ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕ–2ಕ್ಕೆ ದೂರು ಸಲ್ಲಿಸಿದ್ದರು.
ಆರೋಪಿಗಳ ಸೂಚನೆಯಂತೆ ದೂರುದಾರರು ಶನಿವಾರ ಸಂಜೆ ಲಂಚದ ಹಣದೊಂದಿಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಹೋಗಿದ್ದರು. ಹೆಡ್ ಕಾನ್‌ಸ್ಟೆಬಲ್ ನಿಂಗರಾಜೇಗೌಡ ₹ 5,000 ಪಡೆದುಕೊಂಡರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು ಅವರನ್ನು ಬಂಧಿಸಿದರು.
ಠಾಣೆಗೆ ಬಾರದ ಪಿಎಸ್‌ಐ: ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆಗಾಗಿ ಸ್ಥಳಕ್ಕೆ ತೆರಳುವ ಕೆಲವು ನಿಮಿಷಗಳ ಮೊದಲು ಶಿವರಾಜ್ ಪೊಲೀಸ್ ಠಾಣೆಯಿಂದ ಹೊರ ಹೋಗಿದ್ದರು. ನಿಂಗರಾಜೇಗೌಡ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿರುವ ಮಾಹಿತಿ ತಿಳಿದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಪಿಎಸ್‌ಐ ಪತ್ತೆಗೆ ಲೋಕಾಯುಕ್ತ ಪೊಲೀಸರು ಶೋಧ ಮುಂದುವರಿಸಿದ್ದಾರೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಡಿವೈಎಸ್‌ಪಿ ಸತೀಶ್ ಎಂ.ಎಚ್. ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಕೇಶವಮೂರ್ತಿ ಎನ್.ಎನ್. ಮತ್ತು ತಂಡ ಈ ಕಾರ್ಯಾಚರಣೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.