ADVERTISEMENT

ಬೆಂಗಳೂರು | ಪರವಾನಗಿ ನೀಡಲು ₹ 9,000 ಲಂಚ: ಹಿರಿಯ ಕಾರ್ಮಿಕ ನಿರೀಕ್ಷಕನ ಬಂಧನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 16:25 IST
Last Updated 8 ಏಪ್ರಿಲ್ 2024, 16:25 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಹೋಟೆಲ್‌ ಒಂದಕ್ಕೆ ಕಾರ್ಮಿಕ ಇಲಾಖೆಯಿಂದ ಪರವಾನಗಿ ನೀಡಲು ₹ 9,000 ಲಂಚ ಪಡೆದ ಕಾರ್ಮಿಕ ಭವನದ ಹಿರಿಯ ಕಾರ್ಮಿಕ ನಿರೀಕ್ಷಕ ಭೋಪಾಲ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಎಚ್‌ಬಿಆರ್‌ ಬಡಾವಣೆಯ ಟೀಚರ್ಸ್‌ ಕಾಲೋನಿಯಲ್ಲಿ ಮಂಗಳೂರು ಹೋಟೆಲ್‌ ಎಂಬ ಹೆಸರಿನ ಹೋಟೆಲ್‌ ಆರಂಭಿಸಲು ಕಾರ್ಮಿಕ ಇಲಾಖೆಯ ವೃತ್ತ 42ರ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಪರವಾನಗಿ ಕೋರಿ ದೀಕ್ಷಿತ್‌ ಎಂಬುವವರು ಅರ್ಜಿ ಸಲ್ಲಿಸಿದ್ದರು. ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಪರವಾನಗಿ ವಿತರಿಸಲು ₹ 9,000 ಲಂಚ ನೀಡುವಂತೆ ಹಿರಿಯ ಕಾರ್ಮಿಕ ನಿರೀಕ್ಷಕ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕ–2ಕ್ಕೆ ದೂರು ನೀಡಿದ್ದರು.

ADVERTISEMENT

ಆರೋಪಿಯ ಸೂಚನೆಯಂತೆ ಶನಿವಾರ ಸಂಜೆ ಕಾರ್ಮಿಕ ಭವನಕ್ಕೆ ಹೋದ ದೀಕ್ಷಿತ್‌, ₹ 9,000 ಲಂಚದ ಹಣ ತಲುಪಿಸಿದರು. ತಕ್ಷಣ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದರು ಎಂದು ಲೋಕಾಯುಕ್ತ ಪೊಲೀಸ್‌ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕ–2ರ ಎಸ್‌ಪಿ ಕೆ.ವಂಶಿಕೃಷ್ಣ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ನಾಗೇಶ್‌, ಇನ್‌ಸ್ಪೆಕ್ಟರ್‌ ಹಾಲಪ್ಪ ಬಾಲದಂಡಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.