ADVERTISEMENT

ಕೋವಿಡ್‌ ಭೀತಿ: ಬಿಬಿಎಂಪಿಗೆ ಉಪ ಲೋಕಾಯುಕ್ತರ ಎಚ್ಚರಿಕೆ

ವಿಲೇವಾರಿಯಾಗದ ಕಸ l ಅಧಿಕಾರಿಗಳೇ ಹೊಣೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 19:57 IST
Last Updated 5 ಜನವರಿ 2022, 19:57 IST
ಬಿ.ಎಸ್.ಪಾಟೀಲ
ಬಿ.ಎಸ್.ಪಾಟೀಲ   

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿನ ಸಾರ್ವಜನಿಕ ಸ್ಥಳ ಮತ್ತು ರಸ್ತೆಗಳ ಬದಿಯಲ್ಲಿ ಬೇಕಾಬಿಟ್ಟಿ ಕಸ ಸುರಿದರೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ’ ಎಂದು ಲೋಕಾಯುಕ್ತ ಖಡಕ್‌ ಎಚ್ಚರಿಕೆ ನೀಡಿದೆ.

ನಾಗವಾರ ಹಾಗೂ ರೇವಾ ಕಾಲೇಜು ಮಧ್ಯದ ರಸ್ತೆಯಲ್ಲಿ ವ್ಯಾಪಕವಾಗಿ ಚೆಲ್ಲಿದ ಕಸ ವಿಲೇವಾರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಯಲಹಂಕ ಬಿಬಿಎಂಪಿ ವಲಯದ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು, ಈ ಕುರಿತಂತೆ ಬೆಂಗಳೂರು ನಗರ ವಿಭಾಗದ ಲೋಕಾಯುಕ್ತ ಪೊಲೀಸರು ಸಮಗ್ರ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

ಕೆಲವು ಸ್ಥಳಗಳ ಖುದ್ದು ಪರಿಶೀಲನೆ ನಡೆಸಿರುವ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲರು, ‘ಲೋಕಾಯುಕ್ತ ಮಧ್ಯ ಪ್ರವೇಶದಿಂದ ಕಸ ವಿಲೇವಾರಿಯಾಗಬೇಕಿರುವುದು ವಿಷಾದದ ಸಂಗತಿ. ಕೋವಿಡ್‌–19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ರೀತಿಯ ದೂರುಗಳು ಮರುಕಳಿಸಬಾರದು’ ಎಂದು ಬಿಬಿಎಂಪಿಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ADVERTISEMENT

‘ಹೆಗಡೆ ನಗರದ ಬಳಿ ನಿತ್ಯವೂ ಕಸ ಸುರಿಯಲಾಗುತ್ತಿದೆ. ಅಂತೆಯೇ ಈ ಭಾಗದ ಇಂದಿರಾ ಕ್ಯಾಂಟೀನ್‌, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಚಿಕ್ಕಜಾಲ ಸಂಚಾರ ನಿಯಂತ್ರಣ ಪೊಲೀಸ್‌ ಕಚೇರಿ, ಸಾರಾಯಿಪಾಳ್ಯ ಬಸ್‌ ನಿಲ್ದಾಣ, ಜಕ್ಕೂರು ಥಣಿಸಂದ್ರ ರಸ್ತೆ, ರೈಲ್ವೆ ಸೇತುವೆ, ಅಶೋಕ ನಗರ ಬಸ್ ನಿಲ್ದಾಣ ಮತ್ತು ಎಲಿಮೆಂಟ್ಸ್‌ ಮಾಲ್‌ ಬಳಿ ನಿತ್ಯವೂ ಕಸ ಸುರಿಯಲಾಗುತ್ತಿರುವುದಕ್ಕೆ ಸಂಬಂಧಿಸಿದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯವೇ ‍ ಕಾರಣ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

‘ಆರೋಗ್ಯದ ಮೇಲೆ ದುಷ್ಟಪರಿಣಾಮ’

’ಕಳೆದ ಎರಡು ತಿಂಗಳ ಹಿಂದೆ ಸುರಿದ ನಿರಂತರ ಮಳೆಯಿಂದಾಗಿ ನಗರದ ವಿವಿಧೆಡೆ ಸಂಗ್ರಹಗೊಂಡಿದ್ದ ಕಸದ ಗುಡ್ಡೆಗಳು ಈಗ ಸಣ್ಣ ಸಣ್ಣ ತಿಪ್ಪೆಗಳಾಗಿ ಪರಿವರ್ತನೆಯಾಗಿವೆ. ಇದು ಸುತ್ತಮುತ್ತಲ ಪರಿಸರವನ್ನು ಗಬ್ಬು ನಾರುವಂತೆ ಮಾಡಿದ್ದು, ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಟರಿಣಾಮ ಉಂಟು ಮಾಡಬಲ್ಲದು’ ಎಂದು ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ
ಆತಂಕ ವ್ಯಕ್ತಪಡಿಸಿದ್ದಾರೆ.

‘ನಗರದ ವಿವಿಧೆಡೆ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಇಂತಹ ಪ್ರಕಣಗಳಲ್ಲಿಮೇಲ್ನೊಟಕ್ಕೆ ಬಿಬಿಎಂಪಿ ಅಧಿಕಾರಿಗಳ ದುರ್ನಡತೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಹಲವೆಡೆ ಸ್ವತಃ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಈ ರೀತಿಯ ಪ್ರಕರಣಗಳನ್ನು ನಿಯಂತ್ರಿಸುವಂತೆ
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಅವರು, ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.