ADVERTISEMENT

ಕೆಎಸ್‌ಪಿಬಿ ಕಚೇರಿಗಳಲ್ಲಿ ‘ಲೋಕಾ’ ಶೋಧ

ಕೆರೆ, ನದಿ ಕಲುಷಿತ, ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 20:09 IST
Last Updated 25 ಜೂನ್ 2025, 20:09 IST
ಕೆಎಸ್‌ಪಿಸಿಬಿ ಕೇಂದ್ರ ಕಚೇರಿಗೆ ಭೇಟಿ ನೀಡಿದ ಮುಖ್ಯ ಲೋಕಾಯುಕ್ತ ಬಿ.ಎಸ್.ಪಾಟೀಲ್, ದಾಖಲೆಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕೆಎಸ್‌ಪಿಸಿಬಿ ಕೇಂದ್ರ ಕಚೇರಿಗೆ ಭೇಟಿ ನೀಡಿದ ಮುಖ್ಯ ಲೋಕಾಯುಕ್ತ ಬಿ.ಎಸ್.ಪಾಟೀಲ್, ದಾಖಲೆಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.   

ಬೆಂಗಳೂರು: ಕರ್ತವ್ಯ ಲೋಪ, ದುರಾಡಳಿತ, ಭ್ರಷ್ಟಾಚಾರ, ಸ್ವಜನಪಕ್ಷಪಾತದಂತಹ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ದೂರುಗಳು ಬಂದಿದ್ದರಿಂದ ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಮೂರು ಕಚೇರಿಗಳ ಮೇಲೆ ಬುಧವಾರ ದಾಳಿ ನಡೆಸಿದರು.

ಲೋಕಾಯುಕ್ತ ಬಿ.ಎಸ್.ಪಾಟೀಲ್ ನೇತೃತ್ವದ ತಂಡ ಎಂ.ಜಿ.ರಸ್ತೆಯಲ್ಲಿರುವ ಮುಖ್ಯ ಕಚೇರಿ, ಉಪ ಲೋಕಾಯುಕ್ತ ಬಿ.ವೀರಪ್ಪ ನೇತೃತ್ವದ ತಂಡ ಬಸವೇಶ್ವರ ನಗರದ ವಲಯ ಕಚೇರಿ ಹಾಗೂ ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದ ಮತ್ತೊಂದು ತಂಡ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ವಲಯ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತು.

ಕೇಂದ್ರ ಕಚೇರಿಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಬಿ.ಎಸ್.ಪಾಟೀಲ್, ‘ನಿಯಮಗಳನ್ನು ಉಲ್ಲಂಘಿಸಿ ಜಲ ಮಾಲಿನ್ಯ ಮತ್ತು ವಾಯುಮಾಲಿನ್ಯಕ್ಕೆ ಕಾರಣರಾದವರಿಗೆ ದಂಡ ವಿಧಿಸಬೇಕು. ಅಂಥ ಎಷ್ಟು ಪ್ರಕರಣಗಳನ್ನು ನೀವು ದಾಖಲಿಸಿದ್ದೀರಿ?  ಕಾಯ್ದೆ ಉಲ್ಲಂಘಿಸಿರುವ ಎಷ್ಟು ಕೈಗಾರಿಕೆಗಳನ್ನು ಮುಚ್ಚಿಸಿದ್ದೀರಿ? ತ್ಯಾಜ್ಯ ವಿಲೇವಾರಿ ನಿರ್ವಹಣಾ ಕೋಶದಲ್ಲಿ ಎಷ್ಟು ಅರ್ಜಿಗಳನ್ನು ಸ್ವೀಕರಿಸಿ, ವಿಲೇವಾರಿ ಮಾಡಿದ್ದೀರಿ’ ಎಂದು ಸ್ಥಳದಲ್ಲಿದ್ದ ಸದಸ್ಯ ಕಾರ್ಯದರ್ಶಿಗೆ ಪ್ರಶ್ನೆಗಳ ಸುರಿಮಳೆಗೈದರು.

ADVERTISEMENT

‘ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಕೆರೆಗಳಿಗೆ ತ್ಯಾಜ್ಯ ನೀರು ಹರಿಯುತ್ತಿರುವ ಕುರಿತು ದೂರುಗಳಿವೆ. ತ್ಯಾಜ್ಯ ನೀರು ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ? ಬೆಂಗಳೂರು ನಗರದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ(ಎಸ್‌ಟಿಪಿ) ಸ್ಥಾಪಿಸದ ಅಪಾರ್ಟ್‌ಮೆಂಟ್‌ಗಳು ಎಷ್ಟಿವೆ? ಅವುಗಳ ವಿರುದ್ಧ ಏನು ಕ್ರಮಗಳನ್ನು ತೆಗೆದುಕೊಂಡಿದ್ದೀರಿ, ವಿವರಣೆ ಕೊಡಿ’ ಎಂದು ಕೇಳಿದರು.

‘ಕೆಂಪು, ಕಿತ್ತಳೆ, ಹಸಿರು ಹಾಗೂ ಬಿಳಿ ಬಣ್ಣದ ಪ್ರವರ್ಗದಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಬಂದ ಮನವಿಗಳೆಷ್ಟು, ಎಷ್ಟು ಕೈಗಾರಿಕೆಗಳನ್ನು ತಪಾಸಣೆ ನಡೆಸಿದ್ದೀರಿ? ‘ಸಕಾಲ’ದ ಅಡಿ ಸ್ವೀಕರಿಸಿರುವ ಎಷ್ಟು ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಿದ್ದೀರಿ‘ ಎಂದು ಪ್ರಶ್ನಿಸಿದರು.

ಉಪಲೋಕಾಯುಕ್ತ ಬಿ.ವೀರಪ್ಪ ಅವರು, ‘ರಾಜರಾಜೇಶ್ವರಿ ನಗರದಲ್ಲಿನ ಕೆರೆಗಳು ಕಲುಷಿತಗೊಂಡಿವೆ. ಅವುಗಳ ಸುಧಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ’ ಅಧಿಕಾರಿಗಳಿಗೆ ಸೂಚಿಸಿದರು.

‘ನಿಮ್ಮ ವಲಯದಲ್ಲಿ ಎಷ್ಟು ಕಾರ್ಖಾನೆಗಳು, ಆಸ್ಪತ್ರೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿವೆ ಎಂದು ಕೇಳಿದ್ದೆವು. ಅದಕ್ಕೆ ನೀವು ಸರಿಯಾದ ವಿವರಣೆ ನೀಡಿಲ್ಲ’ ಎಂದು ಅಧಿಕಾರಿಗಳ ವಿರುದ್ಧ ಸಿಟ್ಟಾದರು.

‘ವಾಯು ಮತ್ತು ಜಲ ಕಾಯ್ದೆಗಳನ್ನು ಉಲ್ಲಂಘಿಸಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದೀರಿ, ಆದರೆ ಸರಿಯಾದ ವಿವರಗಳನ್ನು ಒದಗಿಸಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವೃಷಭಾವತಿ ನದಿಗೆ ಕಲುಷಿತ ನೀರು ಹರಿಯುತ್ತಿದೆ. ಈ ಬಗ್ಗೆ ಪ್ರಾಧಿಕಾರದವರ ವಿರುದ್ಧ ವರದಿ ಅಥವಾ ದೂರು ಸಲ್ಲಿಸಿದ್ದೀರಾ ಎಂಬ ಪ್ರಶ್ನೆಗೆ ಅಧಿಕಾರಿಗಳು ಯಾವುದೇ ಮಾಹಿತಿ ಒದಗಿಸಲಿಲ್ಲ. ವೃಷಭಾವತಿ ನದಿಯ ಬಫರ್ ವಲಯದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿರುವ ಕುರಿತು ಕೇಳಿದಾಗ ‘ಸ್ಥಳ ಪರಿಶೀಲಿಸಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

ಓಟ ಕಿತ್ತ ಅಧಿಕಾರಿ

ಮುಳಬಾಗಿಲು: ಜಮೀನೊಂದರ ಪೋಡಿ ದಾಖಲೆ ನೀಡಲು ತಾಲ್ಲೂಕು ಕಚೇರಿಯಲ್ಲಿ ಬುಧವಾರ ₹1.50 ಲಕ್ಷ ಪಡೆಯುತ್ತಿದ್ದ ಎಡಿಎಲ್‌ಆರ್ ನಿವೇದಿತಾ ಎಂಬುವರು ಲೋಕಾಯುಕ್ತ ಪೊಲೀಸರನ್ನು ಕಂಡು ಕಚೇರಿಯಿಂದ ಓಡಿ ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.