
ಬೆಂಗಳೂರು: ಇನ್ನು ಹತ್ತು ವರ್ಷದಲ್ಲಿ ಮೈಸೂರು ದಸರಾ ರೀತಿಯಲ್ಲಿ ಬೆಂಗಳೂರು ಹಬ್ಬ ಬೆಳೆಯಲಿದೆ. ಅದಕ್ಕೆ ಪೂರಕವಾಗಿ ಈಗ ಡಬಲ್ ಡೆಕರ್ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಲಂಡನ್ ಮಾದರಿಯ ಅಂಬಾರಿ ಡಬಲ್ ಡೆಕರ್‌ನ ಮೂರು ಬಸ್‍ಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಬೆಂಗಳೂರಿನಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ನಾವು ಮುಚ್ಚಿಟ್ಟಿದ್ದೇವೆ. ವಿಧಾನಸೌಧವನ್ನು ಇಲ್ಲಿವರೆಗೆ ಆಡಳಿತ ಕೇಂದ್ರವಾಗಿ ಮಾತ್ರ ನೋಡಲಾಗುತ್ತಿತ್ತು. ಅದು ಪ್ರವಾಸಿಗರನ್ನು ಸೆಳೆಯುವ ಕೇಂದ್ರವೂ ಹೌದು. ಈ ರೀತಿ ಅನೇಕ ಇವೆ. ಬೆಂಗಳೂರನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು’ ಎಂದು ವಿವರಿಸಿದರು.
ಬೆಂಗಳೂರು ಹಬ್ಬದಲ್ಲಿ 350ಕ್ಕೂ ಅಧಿಕ ವಿಷಯಗಳ ಪ್ರದರ್ಶನ ಇರಲಿದೆ. ಸಂಗೀತ, ಸಂಸ್ಕೃತಿ, ಕಲೆ ಇತ್ಯಾದಿಯನ್ನು ಜನರಿಗೆ ಮುಟ್ಟಿಸುವ ಪ್ರಯತ್ನವನ್ನು ಬೆಂಗಳೂರು ಹಬ್ಬ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಡಬಲ್ ಡೆಕರ್ ಬಸ್ ಪರಿಚಯಿಸಲಾಗಿದೆ ಎಂದು ಹೇಳಿದರು.
ಡಬಲ್ ಡೆಕರ್ ವಿಶೇಷ:
ವಿಶ್ವವಿಖ್ಯಾತ ಹಂಪಿ ಮತ್ತು ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಪ್ರವಾಸಿಗರಿಗೆ ಲಂಡನ್ ಬಿಗ್ ಬಸ್ ಮಾದರಿಯ 6 ಡಬಲ್ ಡೆಕರ್ ತೆರೆದ ಬಸ್ಸುಗಳನ್ನು ಕೆಎಸ್‌ಟಿಡಿಸಿ ವತಿಯಿಂದ ಪ್ರಾರಂಭಿಸಲು ಸರ್ಕಾರವು ಕಳೆದ ಬಜೆಟ್‌ನಲ್ಲಿ ₹5 ಕೋಟಿ ಒದಗಿಸಿತ್ತು. ಮೈಸೂರಿನಲ್ಲಿ ಕಳೆದ ದಸರಾ ಸಮಯದಲ್ಲಿ ಆರು ಬಸ್‌ಗಳನ್ನು ಪರಿಚಯಿಸಲಾಗಿತ್ತು. ಅದು ಯಶಸ್ವಿಯೂ ಆಗಿತ್ತು. ಹಂಪಿಯಲ್ಲಿ ರಸ್ತೆಗಳು ಕಿರಿದಾಗಿರುವುದರಿಂದ ಅಲ್ಲಿ ಡಬಲ್ ಡೆಕರ್ ಕಾರ್ಯಾಚರಣೆ ಆರಂಭಿಸಿರಲಿಲ್ಲ.
ದಸರಾ ನಂತರ ಆರು ಡಬಲ್ ಡೆಕರ್‌ಗಳಲ್ಲಿ ಮೂರು ಮೈಸೂರಿನಲ್ಲಿ ಕಾರ್ಯಾಚರಣೆಗೆ ಇಟ್ಟು, ಉಳಿದ ಮೂರನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಇಳಿಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿತ್ತು. ರವೀಂದ್ರ ಕಲಾಕ್ಷೇತ್ರ ಕಾರ್ಪೊರೇಷನ್ ಸರ್ಕಲ್-ಹಡ್ಸನ್ ಸರ್ಕಲ್-ಕಸ್ತೂರಬಾ ರಸ್ತೆ-ವಿಶ್ವೇಶ್ವರಯ್ಯ ಮ್ಯೂಸಿಯಂ-ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ, ಅಂಚೆ ಕಚೇರಿ, ನ್ಯಾಯಾಲಯ/ವಿಧಾನಸೌಧ-ಕೆ.ಆರ್. ಸರ್ಕಲ್-ಹಡ್ಸನ್ ಸರ್ಕಲ್-ಕಾರ್ಪೊರೇಷನ್ ಸರ್ಕಲ್-ರವೀಂದ್ರ ಕಲಾಕ್ಷೇತ್ರಕ್ಕೆ ಸಂಚರಿಸಲಿದೆ.
ಮೇಲಿನ ಡೆಕ್‌ನಲ್ಲಿ 20 ಆಸನ, ಕೆಳಗಿನ ಡೆಕ್‌ನಲ್ಲಿ 20 ಆಸನ ಸೇರಿ ಒಟ್ಟು 40 ಆಸನಗಳನ್ನು ಈ ಬಸ್ ಹೊಂದಿದ್ದು, ಪ್ರತಿ ಪ್ರಯಾಣಿಕರಿಗೆ ₹180 ದರ ನಿಗದಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.