ADVERTISEMENT

ಲಾರಿ ಇಮ್ರಾನ್‌ಗೆ ಪೊಲೀಸರ ಗುಂಡೇಟು

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 16:42 IST
Last Updated 3 ಜನವರಿ 2021, 16:42 IST
ಲಾರಿ ಇಮ್ರಾನ್
ಲಾರಿ ಇಮ್ರಾನ್   

ಬೆಂಗಳೂರು: ಸುಲಿಗೆ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿದ್ದ ಆರೋಪಿ ಇಮ್ರಾನ್ ಅಲಿಯಾಸ್ ಲಾರಿ (31) ಎಂಬಾತನನ್ನು ಸಂಪಿಗೆಹಳ್ಳಿ ಪೊಲೀಸರು, ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ.

‘ಸಂಪಿಗೆಹಳ್ಳಿಯಲ್ಲಿ ವಾಸವಿದ್ದ ಇಮ್ರಾನ್ ವಿರುದ್ಧ 5ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಗುಂಡೇಟಿನಿಂದ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

‘ಠಾಣೆ ವ್ಯಾಪ್ತಿಯಲ್ಲಿ ಗೋಪಿಚಂದ್ ಎಂಬುವರನ್ನು ಅಡ್ಡಗಟ್ಟಿದ್ದ ಆರೋಪಿ, ₹13 ಸಾವಿರ ನಗದು ಹಾಗೂ ಬೈಕ್‌ ಸುಲಿಗೆ ಮಾಡಿ ಪರಾಗಿಯಾಗಿದ್ದ. ಭಾನುವಾರ ಬೆಳಿಗ್ಗೆ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಇದ್ದ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ಹಾಗೂ ಪಿಎಸ್‌ಐ ಮಧುಸೂದನ್ ನೇತೃತ್ವದ ತಂಡ, ಸ್ಥಳಕ್ಕೆ ಹೋಗಿತ್ತು.’

ADVERTISEMENT

‘ಪೊಲೀಸರನ್ನು ನೋಡಿದ್ದ ಆರೋಪಿ ಇಮ್ರಾನ್, ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಹಿಡಿಯಲು ಬಂದ ಹೆಡ್‌ ಕಾನ್‌ಸ್ಟೆಬಲ್ ಅಶೋಕ್‌ ಮೇಲೆ ಹಲ್ಲೆ ಮಾಡಿದ್ದ. ರಕ್ಷಣೆಗೆ ಹೋದ ಪಿಎಸ್‌ಐ ಮಧುಸೂದನ್, ಪಿಸ್ತೂಲ್ ತೋರಿಸಿ ಶರಣಾಗುವಂತೆ ಆರೋಪಿಗೆ ಹೇಳಿದ್ದರು. ಅವರ ಮೇಲೂ ಆರೋಪಿ ಹಲ್ಲೆಗೆ ಮುಂದಾಗಿದ್ದ. ಅದೇ ಸಂದರ್ಭದಲ್ಲೇ ಆತ್ಮರಕ್ಷಣೆಗಾಗಿ ಪಿಎಸ್‌ಐ, ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ’ ಎಂದೂ ಅಧಿಕಾರಿ ವಿವರಿಸಿದರು.

‘ಆರೋಪಿಯಿಂದ ಹಲ್ಲೆಗೀಡಾಗಿರುವ ಅಶೋಕ್‌ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಆರೋಪಿ ಚೇತರಿಕೆಯಾದ ಬಳಿಕ ಕಸ್ಟಡಿಗೆ ಪಡೆಯಲಾಗುವುದು’ ಎಂದೂ ಹೇಳಿದರು.

ಸಹಚರರ ಬಂಧನ; ‘ಇಮ್ರಾನ್‌ ಸಹಚರರಾದ ನಿಜಾಮ್ ಅಲಿಯಾಸ್ ಕುಟ್ಟಿ ಹಾಗೂ ಉಬೇದ್ ಎಂಬುವರನ್ನೂ ಬಂಧಿಸಲಾಗಿದೆ. ಇವರೆಲ್ಲ ಸೇರಿ ಗ್ಯಾಂಗ್ ಕಟ್ಟಿಕೊಂಡು ಸುಲಿಗೆ ಮಾಡುತ್ತಿದ್ದರು. ಆರೋಪಿ ಬಂಧನದಿಂದ ಎಚ್‌ಎಎಲ್‌, ಬಾಣಸವಾಡಿ, ರಾಜಾನಕುಂಟೆ, ದಾಬಸ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳು ಪತ್ತೆಯಾಗಿವೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.