ADVERTISEMENT

₹ 2.5 ಕೋಟಿ ಆಸೆಯಿಂದ ₹ 1.07 ಲಕ್ಷ ಕಳೆದುಕೊಂಡ!

ಕಿಡ್ನಿ ಮಾರಾಟ, ಖರೀದಿ ಆಮಿಷ: ಕೆಮರೊನ್ ಪ್ರಜೆ ವಿರುದ್ಧ ಮತ್ತೊಂದು ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 22:13 IST
Last Updated 18 ಫೆಬ್ರುವರಿ 2020, 22:13 IST

ಬೆಂಗಳೂರು: ವೈದ್ಯರ ಹೆಸರು ಬಳಸಿಕೊಂಡು, ಕಿಡ್ನಿ ಮಾರಾಟ ಮತ್ತು ಖರೀದಿಸುವುದಾಗಿ ಅಮಾಯಕರಿಂದ ಲಕ್ಷಾಂತರ ರೂಪಾಯಿ ವಂಚಿಸಿ ಸಿಕ್ಕಿಬಿದ್ದಿರುವ ಕೆಮರೊನ್ ಪ್ರಜೆ ಫತ್‌ಬ್ವೆಕಾ ಡೆಕ್ಲನ್ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ವಂಚನೆಗೆ ಒಳಗಾಗಿರುವ ದಾಸನಪುರದ ನಿವಾಸಿ ಪ್ರದೀಪ್ ಕುಮಾರ್ (26) ದೂರು ನೀಡಿದ್ದಾರೆ. ಫತ್‌ಬ್ವೆಕಾನನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.

ಪ್ರದೀಪ್ 2019ರ ನ. 19ರಂದು ‘ಸೇಲ್‍ಕಿಡ್ನಿ ಡಾಟ್ ಸೈಟ್’ ಎಂಬ ವೆಬ್‍ಸೈಟ್‍ನಲ್ಲಿ ಕಿಡ್ನಿ ಮಾರಾಟ ಕುರಿತು ಜಾಹೀರಾತು ಗಮನಿಸಿದ್ದರು. ಅದರಲ್ಲಿದ್ದ ಸಂಖ್ಯೆಗೆ ಕರೆ ಮಾಡಿದಾಗ ಆರೋಪಿ ಫತ್‌ಬ್ವೆಕಾ, ‘ನನ್ನ ಹೆಸರು ಡಾ. ಗೋಕುಲಕೃಷ್. ಬಾಣಸವಾಡಿಯ ಸ್ಪೆಷಲಿಸ್ಟ್ ಆಸ್ಪತ್ರೆಯಲ್ಲಿ ನರರೋಗ ತಜ್ಞ’ ಎಂದಿದ್ದ. ಆತನ ಮಾತು ನಂಬಿದ ಪ್ರದೀಪ್, ‘ನಾನು ಕಿಡ್ನಿ ಕೊಡಲು ಸಿದ್ಧ’ ಎಂದಿದ್ದರು.

ADVERTISEMENT

ಒಂದು ಕಿಡ್ನಿಗೆ ₹ 2.5 ಕೋಟಿ ನೀಡಲಾಗುವುದು ಎಂದು ನಂಬಿಸಿದ ಫತ್‌ಬ್ವೆಕಾ, ಪ್ರದೀಪ್ ಅವರ ರಕ್ತ ಗುಂಪು, ವಯಸ್ಸು ಮತ್ತಿತರ ದಾಖಲೆ ನೀಡುವಂತೆ ಸೂಚಿಸಿದ್ದ. ‘ನೋಂದಣಿ ಶುಲ್ಕ ₹ 8,500, ವಿಮೆ ಶುಲ್ಕ ₹ 18,200, ಜಿಎಸ್‍ಟಿ ₹ 32,500, ಆಸ್ಪತ್ರೆಯ ಪ್ರೊಸೆಸಿಂಗ್ ಶುಲ್ಕ ₹ 48 ಸಾವಿರವನ್ನು ಮುಂಗಡವಾಗಿ ಪಾವತಿಸಿ ಹೆಸರು ನೋಂದಣಿ ಮಾಡಿಸಿಕೊಂಡರೆ ಮುಂಗಡವಾಗಿ ₹ 1.5 ಕೋಟಿ ನೀಡುತ್ತೇನೆ. ಉಳಿದ ₹ 1 ಕೋಟಿ ಕಿಡ್ನಿ ಮಾರಾಟದ ಬಳಿಕ ಕೊಡಲಾಗುವುದು’ ಎಂದೂ ಫತ್‌ಬ್ವೆಕಾ ತಿಳಿಸಿದ್ದ.

₹ 2.5 ಕೋಟಿಯ ಆಸೆಯಿಂದ ಫತ್‌ಬ್ವೆಕಾ ಹೇಳಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹ 1.07 ಲಕ್ಷ ಪ್ರದೀಪ್‌ ಜಮೆ ಮಾಡಿದ್ದರು. ಇನ್ನೂ ಜಮೆ ಮಾಡುವಂತೆ ಫತ್‌ಬ್ವೆಕಾ ಸೂಚಿಸಿದಾಗ ಪ್ರದೀಪ್‍ಗೆ ಈ ಬಗ್ಗೆ ಶಂಕೆ ಬಂದಿತ್ತು. ವೈಟ್‍ಫೀಲ್ಡ್‌ನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ತೆರಳಿ, ಡಾ. ಗೋಕುಲ್ ಕೃಷ್ಣ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ, ‘ನನ್ನ ಹೆಸರಿನಲ್ಲಿ ಅಪರಿಚಿತರು ಸುಳ್ಳು ಮಾಹಿತಿ ನೀಡಿ ಮೋಸ ಮಾಡುತ್ತಿದ್ದಾರೆ’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.