
ಅಗ್ನಿ ಅವಘಡ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ ಯುವತಿಯ ತಾಯಿಯ ಮೇಲೆ ಯುವಕನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಸಾಣೆಗುರುವನಹಳ್ಳಿಯಲ್ಲಿ ನಡೆದಿದೆ.
ತೀವ್ರ ಸುಟ್ಟ ಗಾಯಗಳಿಂದ ಅಸ್ವಸ್ಥಗೊಂಡಿರುವ ಗೀತಾ (40) ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಮುತ್ತು ತಲೆಮರೆಸಿಕೊಂಡಿರುವುದಾಗಿ ಬಸವೇಶ್ವರನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನ ಗೀತಾ, ಮಗಳ ಜತೆ ಸಾಣೆಗುರುವನಹಳ್ಳಿಯಲ್ಲಿ ವಾಸವಿದ್ದು, ಮನೆಯ ಸಮೀಪವೇ ಪ್ರಾವಿಷನ್ ಸ್ಟೋರ್ ಇಟ್ಟುಕೊಂಡಿದ್ದರೆ, ಆರೋಪಿ ಟೀ ಅಂಗಡಿ ಇಟ್ಟುಕೊಂಡಿದ್ದ. ಮಗಳು ಹಾಗೂ ಮುತ್ತುವಿನ ಪ್ರೀತಿಯ ವಿಚಾರ ತಿಳಿದಿದ್ದ ಅವರು, ಮಗಳನ್ನು ಆತನಿಗೆ ಕೊಟ್ಟು ಮದುವೆ ಮಾಡಲು ಮಾತುಕತೆ ನಡೆಸಿದ್ದರು ಎಂದು ಹೇಳಿದ್ದಾರೆ.
ಆರು ತಿಂಗಳಿನಿಂದ ಗೀತಾ ಅವರ ಮನೆಯಲ್ಲೇ ಆರೋಪಿ ವಾಸವಾಗಿದ್ದ. ಮದ್ಯವ್ಯಸನಿಯಾಗಿದ್ದ ಕಾರಣ ಆತನ ಜತೆ ಮಗಳ ಮದುವೆ ಮಾಡದಿರಲು ಇತ್ತೀಚೆಗೆ ಅವರು ನಿರ್ಧರಿಸಿದ್ದರು. ಈ ಕಾರಣಕ್ಕೆ ಕೋಪಗೊಂಡಿದ್ದ ಮುತ್ತು, ಗೀತಾ ಅವರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಸೋಮವಾರ ರಾತ್ರಿ ಸಹ ಜಗಳವಾಡಿದ್ದ. ಬಳಿಕ ಗೀತಾ ಅವರು ನಿದ್ದೆಗೆ ಜಾರಿದಾಗ ಆರೋಪಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ವೇಳೆ ಮನೆಯಲ್ಲೇ ಇದ್ದ ಗೀತಾ ಅವರ ಮಗಳು ನೆರೆಹೊರೆಯವರ ಸಹಾಯದಿಂದ ಬೆಂಕಿ ನಂದಿಸಿ, ತಾಯಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇಕಡ 50ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದು, ಆತನ ಪತ್ತೆಗೆ ಶೋಧ ಮುಂದುವರಿದಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.