ಬೆಂಗಳೂರು ಕೃಷಿ ವಿಶ್ವವಿದ್ಯಾಲಯ
ಬೆಂಗಳೂರು: ‘ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲು ಸಮೀಕ್ಷೆ ಆಧಾರಿತ ಸುಸ್ಥಿರ ಜಲಾನಯನ ನಿರ್ವಹಣೆ (ಎಲ್‌ಆರ್‌ಐ) ಯೋಜನೆ ಸಹಕಾರಿ ಆಗಲಿದೆ. ಈಗಾಗಲೇ ಇದನ್ನು ಕರ್ನಾಟಕ, ಒಡಿಶಾದಲ್ಲಿ ಅನುಷ್ಠಾನಗೊಳಿಸಲಾಗಿದೆ’ ಎಂದು ಕೇಂದ್ರ ಸರ್ಕಾರದ ಭೂ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ನಿತಿನ್ ಖಾಡೆ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಲಾನಯನ ನಿರ್ವಹಣೆಯ ಉತ್ಕೃಷ್ಟ ಕೇಂದ್ರ, ಜಲಾನಯನ ಅಭಿವೃದ್ಧಿ ಇಲಾಖೆ, ಭೂ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ‘ಭೂ ಸಂಪನ್ಮೂಲ ಸಮೀಕ್ಷೆ ಆಧಾರಿತ ಸುಸ್ಥಿರ ಜಲಾನಯನ ನಿರ್ವಹಣೆ’ ಕುರಿತು ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಜಲಾನಯನ ಪ್ರದೇಶದಲ್ಲಿ ಬರುವ ಸರ್ವೆ ನಂಬರ್‌ವಾರು ನಿರ್ದಿಷ್ಟ ಸಮಸ್ಯೆಗಳು ಹಾಗೂ ಕಾರಣಗಳನ್ನು ಭೂ ಸಮೀಕ್ಷೆ ಹಾಗೂ ಜಲವಿಜ್ಞಾನ ಅಧ್ಯಯನಗಳಿಂದ ತಿಳಿದುಕೊಳ್ಳಲಾಗುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸಲು ನಿಖರವಾದ ಭೂ ಹಾಗೂ ನೀರು ಸಂರಕ್ಷಣೆಯ ವಿಧಾನಗಳನ್ನು ಆಯ್ಕೆ ಮಾಡಿ, ಅನುಷ್ಠಾನಗೊಳಿಸಲಾಗುತ್ತದೆ. ಜಲಾನಯನ ಪ್ರದೇಶದಿಂದ ಹರಿದುಹೋಗುವ ನೀರನ್ನು ತಡೆಹಿಡಿಯಲು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುತ್ತದೆ. ಭೂ ಸಂಪನ್ಮೂಲ ಸಮೀಕ್ಷೆಯ ಆಧಾರದ ಮಾಹಿತಿಯ ಪ್ರಕಾರ ರೈತರ ಜಮೀನಿಗೆ ಸೂಕ್ತ ಬೆಳೆಗಳ ಆಯ್ಕೆಯನ್ನೂ ಮಾಡಲಾಗುತ್ತದೆ’ ಎಂದರು.
‘ಈ ಯೋಜನೆ ಅಡಿಯಲ್ಲಿ ಈಗಾಗಲೇ 35 ಸಾವಿರ ರೈತರಿಗೆ ಹವಾಮಾನ ಆಧಾರಿತ ಬೆಳೆಗಳನ್ನು ಬೆಳೆಯಲು ತರಬೇತಿ ನೀಡಲಾಗಿದೆ. ಇದರಲ್ಲಿ 16 ಸಾವಿರ ರೈತರು ತಮ್ಮ ಜಮೀನಿನಲ್ಲಿ ಈ ಪದ್ಧತಿಯ ಅನುಸಾರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಜಲಾನಯನ ಉತ್ಕೃಷ್ಟ ಕೇಂದ್ರದಿಂದ ದೇಶದ ವಿವಿಧ ರಾಜ್ಯಗಳ 923 ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಜಲಾನಯನ ನಿರ್ವಹಣೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ನವೀನ ಪದ್ಧತಿಗಳ ಬಗ್ಗೆ ತರಬೇತಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
ಜಲಾನಯನ ಇಲಾಖೆಯ ಆಯುಕ್ತ ಮಹೇಶ್ ಬಿ. ಶಿರೂರು, ನಿರ್ದೇಶಕ ಮೊಹಮ್ಮದ ಪರವೇಜ ಬಂತನಾಳ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್. ಪಾಟೀಲ್, ವಿಶ್ವಬ್ಯಾಂಕ್‌ನ ಸಲಹೆಗಾರ ಜೆ.ವಿ.ಆರ್. ಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.