ADVERTISEMENT

ಅಸಹಿಷ್ಣುತೆ ರೋಗಕ್ಕೆ ಶರಣ ಸಾಹಿತ್ಯವೇ ಮದ್ದು: ಎಂ.ಎಸ್.ಆಶಾದೇವಿ

ನಗರ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಎಂ.ಎಸ್.ಆಶಾದೇವಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 19:06 IST
Last Updated 22 ಅಕ್ಟೋಬರ್ 2022, 19:06 IST
ಎಂ.ಎಸ್ ಆಶಾದೇವಿ ಅವರನ್ನು ಶರಣ ಸಾಹಿತ್ಯ ಪರಿಷತ್ತಿನಿಂದ ಸನ್ಮಾನಿಸಲಾಯಿತು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಗೀತಾ ಜಯಂತ್, ಬೆಂಗಳೂರು ನಗರ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರಮೀಳಾ ಗರಡಿ, ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ, ಪರಿಷತ್ತಿನ ಕಾರ್ಯದರ್ಶಿ ಕೆ. ಗುರುಪ್ರಸಾದ್ ಕುಚ್ಚಂಗಿ, ಆಲಗೂರು ಪಂಚಮಸಾಲಿ ಪೀಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಪರಿಷತ್ತಿನ ಅಧ್ಯಕ್ಷ ಕೆ.ವಿ ನಾಗರಾಜಮೂರ್ತಿ, ತೋಂಟದ ಸಿದ್ಧರಾಮ ಸ್ವಾಮೀಜಿ ಇದ್ದರು-- - -----ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಅಸಹಿಷ್ಣುತೆ ಮತ್ತು ಅಮಾನವೀಯತೆ ಎಂಬ ರೋಗಕ್ಕೆ ತುತ್ತಾಗಿರುವ ಮಾನವ ಸಮುದಾಯಕ್ಕೆ ಸಹಿಷ್ಣುತೆ ಮತ್ತು ಪ್ರೀತಿಯೇ ಮದ್ದು. ಈ ಮದ್ದು ಶರಣ ಚಳವಳಿಯಲ್ಲಿದೆ’ ಎಂದು ವಿಮರ್ಶಕಿ ಎಂ.ಎಸ್. ಆಶಾದೇವಿ ಪ್ರತಿಪಾದಿಸಿದರು.

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಚನ ಚಳವಳಿಯ ಬಗ್ಗೆ ಇನ್ನಿಲ್ಲದ ಪ್ರೀತಿ ಅಭಿಮಾನದಿಂದ ನಾವು ಮಾತನಾಡುತ್ತೇವೆ. ವಚನ ಪರಂಪರೆಯ ಉತ್ತರಾಧಿಕಾರಿಗಳೆಂದು ಹೇಳಿಕೊಳ್ಳುತ್ತಿದ್ದೇವೆ. ಆದರೆ, ಆ ಹೊಣೆ ಯನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎನ್ನುದಕ್ಕೆ ಸಮಕಾಲೀನ ಸಂದರ್ಭವೇ ಸಾಕ್ಷಿ’ ಎಂದರು.

ADVERTISEMENT

‘ದಲಿತರ ಮತ್ತು ಮಹಿಳೆಯರ ಸವಾಲುಗಳಿಗೆ ಪರಿಹಾರ ಸಿಗದ ಹೊರತು, ಮತಾಂಧತೆ ಮತ್ತು ಅದರ ಕ್ರೌರ್ಯದ ನೂರು ರೂಪಗಳು ನಿಲ್ಲದ ಹೊರತು ಈ ಜಗತ್ತಿನಲ್ಲಿ ಶಾಂತಿ ಸಮಾಧಾನ ನೆಲೆಸಲಾರವು. ಶರಣರ ಪರಂಪರೆಯವರು ಎಂದು ಹೆಮ್ಮೆಯಿಂದ ಘೋಷಿಸಿಕೊಳ್ಳುವ ನಾವು ಮಾತಿನಿಂದ ಕೃತಿಗೆ ಇಳಿಯಬೇಕಾದ ತುರ್ತಿದೆ. ಎದೆಯ ದನಿಯ ಶರಣ ಧರ್ಮವನ್ನು ಜನರ ಧರ್ಮವಾಗಿಸುವ ಜರೂರಿದೆ. ಪ್ರೀತಿ ಮತ್ತು ಸಹಿಷ್ಣುತೆಯ ಮದ್ದನ್ನು ಮೊದಲು ನಾವು ಕುಡಿದು, ಬಳಿಕ ಬೇರೆಯವರಿಗೆ ಕುಡಿಸಬೇಕಾಗಿದೆ’ ಎಂದು ಅವರು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಇಡೀ ಕನ್ನಡ ಸಾಹಿತ್ಯಕ್ಕೆ ಪ್ರಜ್ಞೆ ತಂದು ಕೊಟ್ಟ ಸಾಹಿತ್ಯ ಇದ್ದರೆ ಅದು ವಚನ ಸಾಹಿತ್ಯ. ಜನ ಪರವಾಗಿ ನಿಲುವು ಹೊಂದಿರುವ ಪ್ರಪಂಚದ ಏಕೈಕ ಸಾಹಿತ್ಯ ಎಂದರೆ ಶರಣ ಸಾಹಿತ್ಯ’ ಎಂದರು.

ಸಮ್ಮೇಳನ ಉದ್ಘಾಟಿಸಿದ ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ‘ಪ್ರಸ್ತುತ ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯವಿದ್ದರೆ, ಅದು ವಚನ ಸಾಹಿತ್ಯದಿಂದ ಮಾತ್ರ ಸಾಧ್ಯ. ವಚನ ಸಾಹಿತ್ಯ ನಮ್ಮ ಬದುಕಿನ ಮಾರ್ಗ ವಾಗಿದೆ. ಸಮ ಸಮಾಜದ ನಿರ್ಮಾಣಕ್ಕೆ ಅತ್ಯಂತ ಪ್ರಮುಖವಾಗುತ್ತದೆ’ ಎಂದರು.

ಪರಿಷತ್ತಿನ ನಗರ ಜಿಲ್ಲಾ ಘಟಕ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.