ಬೆಂಗಳೂರು: ‘ಬದಲಾಗುತ್ತಿರುವ ಹೊಸ ತಂತ್ರಜ್ಞಾನಗಳ ಬಗ್ಗೆ ಅರಿತು, ಹೊಸ ಆವಿಷ್ಕಾರಗಳಿಗೆ ಅಡಿಪಾಯ ಹಾಕಬೇಕು’ ಎಂದು ಇಂಟರ್‌ನ್ಯಾಷನಲ್ ಸ್ಟಾರ್ಟ್ಅಪ್ ಫೌಂಡೇಷನ್ (ಐಎಸ್ಎಫ್) ಸಹ ಸಂಸ್ಥಾಪಕ ಮತ್ತು ನಿರ್ದೇಶಕ ಶಿವ ಮಹೇಶ್ ತಂಗುತುರು ಹೇಳಿದರು.
ಮದನಪಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್ (ಎಂಐಟಿಎಸ್) ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಂಬಿಎ, ಎಂಸಿಎ ಮತ್ತು ಎಂ.ಟೆಕ್ ತರಗತಿಗಳು ಬುಧವಾರ ಪ್ರಾರಂಭವಾದವು.
ಎಂಐಟಿಎಸ್ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿದ ಶಿವ ಮಹೇಶ್ ತಂಗುತುರು, ‘ವಿದ್ಯಾರ್ಥಿಗಳು ಉದ್ಯಮಿಗಳಾಗಿ ಹೊರಹೊಮ್ಮಬೇಕು. ಇದಕ್ಕೆ ಕೋರ್ಸ್‌ಗಿಂತ, ಜ್ಞಾನ ಮತ್ತು ಕೌಶಲ ಮುಖ್ಯವಾಗುತ್ತದೆ. ಇಲ್ಲಿ ಉತ್ತಮ ಶಿಕ್ಷಕರಿದ್ದು, ಅವರ ಮಾರ್ಗದರ್ಶನಲ್ಲಿ ಸಂಶೋಧನೆಗಳನ್ನು ನಡೆಸಬೇಕು’ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಸಿ. ಯುವರಾಜ್, ‘ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಪ್ರಯೋಗಾಲಯಗಳು, ಮೂಲಸೌಕರ್ಯ, ಗ್ರಂಥಾಲಯ ಇತ್ಯಾದಿ ಸೌಕರ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಬೆಳೆಯಲು ಹಲವು ಅವಕಾಶಗಳಿವೆ’ ಎಂದರು.
ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ದ್ವಾರಕನಾಥ್, ಕುಲಸಚಿವ ಪ್ರದೀಪ್ ಕುಮಾರ್, ಡೀನ್ ಶ್ರೀಮಂತ ಬಸು, ಎಂಬಿಎ ವಿಭಾಗದ ಮುಖ್ಯಸ್ಥೆ ಭಾನುಶ್ರೀ, ಎಂಸಿಎ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.