ADVERTISEMENT

ಮಾದನಾಯಕನಹಳ್ಳಿ–ಕಡಬಗೆರೆ ಕ್ರಾಸ್‌: ರಸ್ತೆ ಹುಡುಕಾಡುವ ವಾಹನ ಸವಾರರು

ಮಾದನಾಯಕನಹಳ್ಳಿ–ಕಡಬಗೆರೆ ಕ್ರಾಸ್‌ ತನಕ ಪ್ರಯಾಣ ಹೈರಾಣ

ವಿಜಯಕುಮಾರ್ ಎಸ್.ಕೆ.
Published 2 ಡಿಸೆಂಬರ್ 2021, 19:45 IST
Last Updated 2 ಡಿಸೆಂಬರ್ 2021, 19:45 IST
ಸಿದ್ಧನಹೊಸಹಳ್ಳಿ ಬಳಿ ಹದಗೆಟ್ಟಿರುವ ರಸ್ತೆ –‍ಪ್ರಜಾವಾಣಿ ಚಿತ್ರಗಳು/ಪ್ರಶಾಂತ್ ಎಚ್.ಜಿ.
ಸಿದ್ಧನಹೊಸಹಳ್ಳಿ ಬಳಿ ಹದಗೆಟ್ಟಿರುವ ರಸ್ತೆ –‍ಪ್ರಜಾವಾಣಿ ಚಿತ್ರಗಳು/ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಬರೀ ಕಲ್ಲು–ಗುಂಡಿಗಳ ಹಾದಿ, ರಸ್ತೆಗಾಗಿ ಹುಡುಕಾಡುವ ವಾಹನ ಸವಾರರು, ದೂಳಿನ ಓಕುಳಿಯಲ್ಲಿ ಮಿಂದೇಳುವ ಜನರು, ಆಸ್ತಮಾದ ಭಯದಲ್ಲಿ ನಿವಾಸಿಗಳು...

ಇದು ತುಮಕೂರು ರಸ್ತೆಯಿಂದ ಲಕ್ಷ್ಮೀಪುರ ಮಾರ್ಗದಲ್ಲಿ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾದನಾಯಕನಹಳ್ಳಿಯಿಂದ ಕಡಬಗೆರೆ ಕ್ರಾಸ್‌ ರಸ್ತೆಯ ಸ್ಥಿತಿ.

12 ಕಿಲೋ ಮೀಟರ್‌ ಉದ್ದದ ಈ ರಸ್ತೆ, ನೈಸ್ ರಸ್ತೆಗೆ ಪರ್ಯಾಯ ರಸ್ತೆಯಂತಿದೆ.‌ ದೊಡ್ಡ ಲಾರಿಗಳು ಸೇರಿ ಸಾವಿರಾರು ವಾಹನಗಳು ನಿತ್ಯ ಸಂಚರಿಸುತ್ತವೆ. ಆದರೂ, ಎರಡು ವರ್ಷಗಳಿಂದ ರಸ್ತೆ ಹಾಳಾಗಿದೆ. ದಿನದಿಂದ ದಿನಕ್ಕೆ ಇನ್ನಷ್ಟು ಹಾಳಾಗುತ್ತಲೇ ಇದೆ.

ADVERTISEMENT

ಮಾದನಾಯಕನಹಳ್ಳಿಯಿಂದ ಹೊರಟು ಸಿದ್ಧನಹೊಸಹಳ್ಳಿ ದಾಟಿದ ಕೂಡಲೇ ರಸ್ತೆಯಲ್ಲಿ ಗುಂಡಿಗಳು ಸಿಗುತ್ತವೆ. ಸಂಚಾರವೇ ಸಾಧ್ಯವಾಗದಷ್ಟು ದೊಡ್ಡದಾಗಿದ್ದ ಹೊಂಡಗಳಿಗೆ ಈಗ ಜಲ್ಲಿ ಸುರಿಯಲಾಗಿದೆ. ಅಲ್ಲಿಂದ ಕೊಂಚ ಮುಂದೆ ಸಾಗಿದರೆ ದೊಂಬರಹಳ್ಳಿಯಲ್ಲಿ ಎದುರಾಗುವ ಗುಂಡಿಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡಲು ಸಾಧ್ಯವೇ ಇಲ್ಲ.

ಅಲ್ಲಿಂದ ಇನ್ನಷ್ಟು ಮುಂದೆ ಸಾಗಿದರೆ ಹೆಜ್ಜೆ ಹೆಜ್ಜೆಗೂ ಗುಂಡಿ ಮತ್ತು ಹೊಂಡಗಳಿವೆ. ವಾಹನಗಳು ಆಮೆಗಳಂತೆ ನಿಧಾನವಾಗಿ ಸಾಗದೆ ಬೇರೆ ದಾರಿ ಇಲ್ಲ. ಲಕ್ಷ್ಮೀಪುರ ದಾಟಿದ ಕೂಡಲೇ ಮತ್ತೆ ಗುಂಡಿಗಳು ಎದುರಾಗುತ್ತವೆ. ಅವುಗಳನ್ನು ನೋಡಿದರೆ ದಾರಿತಪ್ಪಿ ಯಾವುದೋ ಬೆಟ್ಟಗುಡ್ಡಗಳ ನಡುವಿನ ಕಾಲು ದಾರಿಗೆ ಬಂದ ಅನುಭವವಾಗುತ್ತದೆ. ಮಾಗಡಿ ರಸ್ತೆಗೆ ತಲುಪುವ ತನಕ ಅಲ್ಲಲ್ಲಿ ರಸ್ತೆಯ ಸ್ಥಿತಿ ಹೀಗೆಯೇ ಇದೆ.

‘ಮಳೆ ಬಂದರೆ ನೀರು ನಿಲ್ಲುವ ಗುಂಡಿಗಳಲ್ಲಿ ಜನ ಬೀಳುವುದು ಸಾಮಾನ್ಯವಾಗಿದೆ. ಬಿಸಿಲಾದರೆ ಗುಂಡಿ ಮತ್ತು ದೂಳಿನ ನಡುವೆ ಸಿಲುಕಿ ಸವಾರರು ನಲುಗುತ್ತಿದ್ದಾರೆ. ರಸ್ತೆಯ ಉದ್ದಕ್ಕೂ ಇರುವ ಅಂಗಡಿಗಳು, ಹೋಟೆಲ್‌ಗಳೆಲ್ಲವೂ ದೂಳಿನಲ್ಲಿ ಮಿಂದಿವೆ. ದೂಳಿನಲ್ಲಿ ಆಹಾರ ಪದಾರ್ಥಗಳನ್ನು ತಿನ್ನಲು ಯಾರೊಬ್ಬರು ಮನಸು ಮಾಡುವುದಿಲ್ಲ. ಹೋಟೆಲ್ ತೆರೆದಿದ್ದರೂ ವ್ಯಾಪಾರ ಇಲ್ಲ. ಅಂಗಡಿಗಳ ಸ್ಥಿತಿಯೂ ಇದೆ ರೀತಿ ಇದೆ’ ಎಂದು ದೊಂಬರಹಳ್ಳಿಯ ನಂದಿನಿ ಹೇಳಿದರು.


ದೂಳಿನ ನಡುವೆ ವಾಹನ ಚಾಲನೆ ಮಾಡುತ್ತಿರುವ ಸವಾರರು

ಸುಂಕ ತಪ್ಪಿಸಲು ಪರ್ಯಾಯ ಮಾರ್ಗ

ನೈಸ್ ರಸ್ತೆಯಲ್ಲಿ ಪಾವತಿಸಬೇಕಿರುವ ಸುಂಕ ತಪ್ಪಿಸಿಕೊಂಡು ತುಮಕೂರು ರಸ್ತೆಗೆ ದಾಟಿಕೊಳ್ಳಲು ಲಾರಿ ಮತ್ತು ಕಾರು ಚಾಲಕರು ಈ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.

‘ಭಾರಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಅಡ್ಡಾಡಿಯೇ ರಸ್ತೆ ಸಂಪೂರ್ಣ ಹಾಳಾಗಿದೆ. ದುರಸ್ತಿಪಡಿಸುವ ಗೋಜಿಗೇ ಸರ್ಕಾರ ಹೋಗಿಲ್ಲ. ರಸ್ತೆ ಸರಿಪಡಿಸುವ ಬದಲು, ಈ ರಸ್ತೆಯಲ್ಲಿ ಲಾರಿಗಳು ಬರದಂತೆ ಅಡ್ಡಗಟ್ಟಿ ಎಂಬ ಸಲಹೆಯನ್ನು ಜನಪ್ರತಿನಿಧಿಗಳು ನೀಡುತ್ತಾರೆ’ ಎಂದು ಲಕ್ಷ್ಮೀಪುರದ ನಿವಾಸಿಗಳ ಬೇಸರ ವ್ಯಕ್ತಪಡಿಸಿದರು.

‘ಎಲ್ಲ ಲಾರಿಗಳೂ ಸುಂಕ ತಪ್ಪಿಸುವ ಉದ್ದೇಶದಿಂದಲೇ ಬರುತ್ತವೆ ಎಂದು ಹೇಳಲಾಗದು. ರಸ್ತೆ ಅಭಿವೃದ್ಧಿಪಡಿಸದೆ ಈ ರೀತಿಯ ಸಬೂಬು ಹೇಳುವುದು ತರವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಚುನಾವಣೆ ಬಳಿಕ ಟೆಂಡರ್’

‘ಮಾದನಾಯಕಹಳ್ಳಿ–ಕಡಬಗೆರೆ ರಸ್ತೆಯನ್ನು ಸಿಮೆಂಟ್‌ ಸ್ಟೆಬಿಲೈಸೇಷನ್ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲು ಯೋಜನೆ ಸಿದ್ಧಪಡಿಸಲಾಗಿದೆ. ವಿಧಾನ ಪರಿಷತ್ತಿನ ಚುನಾವಣೆ ಮುಗಿದ ಕೂಡಲೇ ಟೆಂಡರ್ ಕರೆಯಲಾಗುವುದು’ ಎಂದು ಬಿಡಿಎ ಎಂಜಿನಿಯರಿಂಗ್ ಸದಸ್ಯ ಶಾಂತರಾಜಣ್ಣ ತಿಳಿಸಿದರು.

‘₹28 ಕೋಟಿ ಮೊತ್ತದ ಯೋಜನೆಗೆ ಈ ಹಿಂದೆಯೇ ಅನುಮೋದನೆ ದೊರೆತಿದೆ. ರಸ್ತೆ ಈಗ ಬಹಳಷ್ಟು ಹಾಳಾಗಿದ್ದು, ವೆಚ್ಚ ಹೆಚ್ಚಾಗಲಿದೆ. ಮೊದಲ ಹಂತದಲ್ಲಿ ₹28 ಕೋಟಿ ಮೊತ್ತಕ್ಕೆ ಎಷ್ಟು ಕಿಲೋ ಮಿಟರ್ ರಸ್ತೆ ಅಭಿವೃದ್ಧಿ ಆಗಲಿದೆ ಎಂಬುದನ್ನು ಅಂದಾಜಿಸಿ ಟೆಂಡರ್ ಕರೆಯಲಾಗುವುದು. ಉಳಿದ ರಸ್ತೆಯನ್ನು ಮತ್ತೊಂದು ಪ್ಯಾಕೇಜ್‌ನಲ್ಲಿ ಅಭಿವೃದ್ಧಿಪಡಿಸಲು ಬಿಡಿಎ ಅಧ್ಯಕ್ಷರು ತಿಳಿಸಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

* ಎರಡು ವರ್ಷಗಳಿಂದ ರಸ್ತೆ ಇದೇ ಸ್ಥಿತಿಯಲ್ಲಿದೆ. ಮಳೆಗಾಲದಲ್ಲಿ ಸಾಕಷ್ಟು ಜನ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಕೆಲವೆಡೆ ಗುಂಡಿಗೆ ಜಲ್ಲಿ ಸುರಿದಿದ್ದಾರೆ, ಹಲವೆಡೆ ಹಾಗೇ ಇದೆ

-ರವೀಂದ್ರ, ಲಕ್ಷ್ಮೀಪುರ


* ರಸ್ತೆಯ ದುಃಸ್ಥಿತಿ ಬಗ್ಗೆ ಹಲವು ಬಾರಿ ಯಲಹಂಕ ಶಾಸಕರ ಗಮನಕ್ಕೆ ತರಲಾಗಿದೆ. ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದಷ್ಟೇ ಹೇಳುತ್ತಿದ್ದಾರೆ. ಕಾಮಗಾರಿ ಮಾತ್ರ ಆರಂಭವಾಗಿಲ್ಲ

-ಮುನಿರಾಜು, ಲಕ್ಷ್ಮೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.