ADVERTISEMENT

ಅಭಿವೃದ್ಧಿ ವಿರೋಧಿಸದ ಗಾಡ್ಗೀಳ್: ರಾಮಚಂದ್ರ ಗುಹಾ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 16:49 IST
Last Updated 26 ಜನವರಿ 2026, 16:49 IST
ಬಿಐಸಿಯಲ್ಲಿ ಸೋಮವಾರ ಏರ್ಪಡಿಸಿದ್ದ ಮಾಧವ ಗಾಡ್ಗೀಳ್‌ ಅವರ ಜೀವನ ಮತ್ತು ಪರಂಪರೆಯ  ಕುರಿತು ಕಾರ್ಯಕ್ರಮದಲ್ಲಿ ಜಾನ್ ಕುರಿಯನ್, ನಾಗೇಶ ಹೆಗಡೆ, ರಾಮಚಂದ್ರ ಗುಹಾ, ಗುರುದಾಸ್ ನುಲ್ಕರ್, ಹರಿಣಿ ನಾಗೇಂದ್ರ, ಉಮಾ ರಾಮಕೃಷ್ಣನ್ ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ
ಬಿಐಸಿಯಲ್ಲಿ ಸೋಮವಾರ ಏರ್ಪಡಿಸಿದ್ದ ಮಾಧವ ಗಾಡ್ಗೀಳ್‌ ಅವರ ಜೀವನ ಮತ್ತು ಪರಂಪರೆಯ  ಕುರಿತು ಕಾರ್ಯಕ್ರಮದಲ್ಲಿ ಜಾನ್ ಕುರಿಯನ್, ನಾಗೇಶ ಹೆಗಡೆ, ರಾಮಚಂದ್ರ ಗುಹಾ, ಗುರುದಾಸ್ ನುಲ್ಕರ್, ಹರಿಣಿ ನಾಗೇಂದ್ರ, ಉಮಾ ರಾಮಕೃಷ್ಣನ್ ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ   

madhava gadgil was not against development

ಬೆಂಗಳೂರು: ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಅವರು ಅಭಿವೃದ್ಧಿ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದರು.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಸೋಮವಾರ ‘ವಿಜ್ಞಾನ, ಉಸ್ತುವಾರಿ ಮತ್ತು ಏಕತೆ’ ಮಾಧವ ಗಾಡ್ಗೀಳ್‌ ಅವರ ಜೀವನ ಮತ್ತು ಪರಂಪರೆ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ಅರಣ್ಯ, ನದಿ, ಅಣೆಕಟ್ಟು ಮತ್ತು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವುಗಳ ರಕ್ಷಣೆಯೇ ಮೊದಲ ಆದ್ಯತೆಯಾಗಿತ್ತು. ಆದರೆ, ಗುತ್ತಿಗೆದಾರರು, ಗಣಿ ಮಾಫಿಯಾ ಮತ್ತು ಜನಪ್ರತಿನಿಧಿಗಳು ಅವರನ್ನು ಅಭಿವೃದ್ಧಿ ವಿರೋಧಿ ಎಂಬಂತೆ ಬಿಂಬಿಸಿದ್ದರು ಎಂದರು.

ಪರಿಸರ ರಕ್ಷಣೆ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದು, ಬೇರೆ ಭಾಷೆಗಳಿಗೂ ಅನುವಾದಗೊಂಡಿದೆ. ಗಾಡ್ಗೀಳ್‌ ಅವರ ‘ಏರುಘಟ್ಟದ ನಡಿಗೆ’ ಆತ್ಮಕಥೆ ಎಂಟು ಭಾಷೆಗಳಲ್ಲಿ ಪ್ರಕಟವಾಗಿದೆ. ಮಾಧವ ಅವರೊಂದಿಗೆ ಕರ್ನಾಟಕದ ಹಲವು ಭಾಗಗಳಿಗೆ ಭೇಟಿ ನೀಡಿ, ಕ್ಷೇತ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದೆ’ ಎಂದು ನೆನಪಿಸಿಕೊಂಡರು.

ವಿಜ್ಞಾನ ಲೇಖಕ ನಾಗೇಶ ಹೆಗಡೆ ಮಾತನಾಡಿ, ‘ಭಾರತದ ಅಭಿವೃದ್ಧಿ ವೈಖರಿಯನ್ನು ‘ಕಬ್ಬಿಣದ ತ್ರಿಭುಜ’ದ ಮೂಲಕ ಗಾಡ್ಗೀಳ್ ನಿರೂಪಿಸಿದ್ದಾರೆ.‌ ರಾಜಕಾರಣಿ, ಗುತ್ತಿಗೆದಾರ, ಎಂಜಿನಿಯರ್‌ ಮತ್ತು ಅಧಿಕಾರಿ ವರ್ಗ ಎಂಬ ಮೂರು ತ್ರಿಭುಜಗಳಲ್ಲಿ ದೇಶದ ಇಡೀ ಸಂಪತ್ತು ಬಂದಿಯಾಗಿದೆ, ಅದು ಶೀಘ್ರ ಕರಗುತ್ತ ಮಹಲುಗಳಾಗುತ್ತಿವೆ ಎಂದು ಅನೇಕ ಸಂದರ್ಭಗಳಲ್ಲಿ ಹೇಳಿದ್ದಾರೆ’ ಎಂದರು. 

ಮಾಧವ ಗಾಡ್ಗೀಳ್‌ ಅವರ ‘ವಿಲೋಮ ನಿಯಮ’ದ ಬಗ್ಗೆ ಪ್ರಸ್ತಾಪಿಸಿದ ಅವರು, ‘ಗ್ರಾಮ ಪಂಚಾಯಿತಿಗೆ ಚುನಾಯಿತರಾದರೆ ಕೆರೆ, ನದಿ, ಕಾಡುಮೇಡುಗಳ ಕುರಿತು ಕಾಳಜಿ ಇರುತ್ತದೆ. ಜಿಲ್ಲಾ ಪಂಚಾಯಿತಿ ಸದಸ್ಯರಲ್ಲಿ ಅದು ತುಸು ಕಮ್ಮಿ ಆಗುತ್ತದೆ. ಶಾಸಕರಲ್ಲಿ ಇನ್ನೂ ಕಮ್ಮಿ ಆಗುತ್ತದೆ, ಸಂಸತ್‌ ಸದಸ್ಯರಾಗುವ ವೇಳೆಗೆ ಪರಿಸರ ಕಾಳಜಿ ಮಾಯವಾಗುತ್ತದೆ’ ಎಂದು ವಿವರಿಸಿದರು.

ಪ್ರಾಧ್ಯಾಪಕಿ ಉಮಾ ರಾಮಕೃಷ್ಣನ್ ಮಾತನಾಡಿ, ‘ಶಾಲೆಯಲ್ಲಿ ಓದುವಾಗ ಮಾಧವ ಗಾಡ್ಗೀಳ್ ಅವರನ್ನು ಭೇಟಿಯಾಗಿದ್ದೆ, ಯಾವುದೇ ವಿಷಯದ ಬಗ್ಗೆ ದತ್ತಾಂಶ ಸಂಗ್ರಹಿಸಿ, ಸಂಶೋಧನೆ ಮಾಡುತ್ತಿದ್ದರು. ಅವರನ್ನು ನೋಡಿದ ಮೇಲೆ ಏನಾದರೂ ಸಾಧಿಸಬಹುದು ಎಂಬುದು ಗೊತ್ತಾಯಿತು’ ಎಂದರು.

ಗೋಖಲೆ ಇನ್‌ಸ್ಟಿಟ್ಯೂಟ್‌ ಆಫ್ ಪೊಲಿಟಿಕ್ಸ್ ಮತ್ತು ಎಕಾನಾಮಿಕ್ಸ್‌ನ ಸುಸ್ಥಿರ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಗುರುದಾಸ್‌ ನುಲ್ಕರ್, ನಿವೃತ್ತ ಪ್ರಾಧ್ಯಾಪಕ ಜಾನ್ ಕುರಿಯನ್ ಹಾಗೂ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಹರಿಣಿ ನಾಗೇಂದ್ರ ಅವರು ಮಾಧವ ಗಾಡ್ಗೀಳ್ ಜತೆಗಿನ ಒಡನಾಟ ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.