ADVERTISEMENT

ಮಾಧವ ಗಾಡ್ಗೀಳ್‌ಗೆ ಸಂತಾಪ ಸೂಚಿಸದ ಪ್ರಧಾನಿ, ಅರಣ್ಯ ಸಚಿವರು: ಪರಿಸರವಾದಿಗಳ ಬೇಸರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 15:33 IST
Last Updated 11 ಜನವರಿ 2026, 15:33 IST
<div class="paragraphs"><p>ಮಾಧವ ಗಾಡ್ಗೀಳ್‌</p></div>

ಮಾಧವ ಗಾಡ್ಗೀಳ್‌

   

ಬೆಂಗಳೂರು: ‘ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಶ್ರಮಿಸಿದ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್‌ ನಿಧನರಾದಾಗ ಇಡೀ ರಾಷ್ಟ್ರವೇ ಮೌನವಾಗಿತ್ತು. ಆದರೆ, ಪ್ರಧಾನಿ, ಕೇಂದ್ರದ ಅರಣ್ಯ ಸಚಿವರು ಸಂತಾಪ ಸೂಚಿಸದಿರುವುದು ಸರಿಯಲ್ಲ’ ಎಂದು ಪರಿಸರವಾದಿಗಳು ಬೇಸರ ವ್ಯಕ್ತಪಡಿಸಿದರು.

ಪ‍ರಿಸರಾಸಕ್ತ ಬಳಗ ಭಾನುವಾರ ಆಯೋಜಿಸಿದ್ದ ಮಾಧವ ಗಾಡ್ಗೀಳ್‌ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. 

ADVERTISEMENT

ವಿಜ್ಞಾನಿ ಶೇಷಗಿರಿ ರಾವ್‌ ಮಾತನಾಡಿ, ‘ಮಾಧವ ಗಾಡ್ಗೀಳ್ ಹಾಗೂ ಅವರ ಪತ್ನಿ ಸುಲೋಚನಾ ಅವರೊಂದಿಗೆ ಕೆಲಸ ಮಾಡಿದ್ದೇನೆ. ಮಾಧವ ಅವರು ತಮ್ಮ ಜೀವನವನ್ನು ಸತ್ಯದ ಅನ್ವೇಷಣೆಗೆ ಮುಡಿಪಾಗಿಟ್ಟಿದ್ದರು. ಪರಿಸರ ಹಾಗೂ ಮನುಷ್ಯರ ಜನಜೀವನವನ್ನು ಸಮಗ್ರವಾಗಿ ನೋಡುತ್ತಿದ್ದರು. ವಿಜ್ಞಾನಿಗಳೊಂದಿಗೆ ಹೇಗೆ ಚರ್ಚಿಸುತ್ತಿದ್ದರೊ ಅದೇ ರೀತಿ ರೈತರೊಂದಿಗೂ ಗಂಭೀರ ಚರ್ಚೆಗಳನ್ನು ಮಾಡುತ್ತಿದ್ದರು. ಅವರು ವಿಜ್ಞಾನಿಗಿಂತ ಹೆಚ್ಚಾಗಿ ಸತ್ಯದ ಅನ್ವೇಷಕರಾಗಿದ್ದರು’ ಎಂದು ಸ್ಮರಿಸಿದರು. 

ಶಿಕ್ಷಣ ತಜ್ಞ ಕೆ.ಇ. ರಾಧಾಕೃಷ್ಣ ಮಾತನಾಡಿ, ‘ಪ್ರಕೃತಿಗೆ ಒಂದು ಜೀವಂತಿಕೆ ಇದೆ ಎಂಬುದನ್ನು ಮಾಧವ ಗಾಡ್ಗೀಳ್‌ ಅವರು ತೋರಿಸಿದ್ದಾರೆ’ ಎಂದರು.

ಟಿ.ವಿ. ರಾಮಚಂದ್ರ ಮಾತನಾಡಿ, ‘ಜನರ ವಿಜ್ಞಾನಿಯಾಗಿದ್ದ ಗಾಡ್ಗೀಳ್‌ ಅವರು ಪರಿಸರ ಸಮತೋಲನಕ್ಕಾಗಿ ಇಡೀ ಬದುಕನ್ನೇ ಮುಡಿಪಾಗಿಟ್ಟಿದ್ದರು. ಪಶ್ಚಿಮಘಟ್ಟಗಳಿಗೆ ಸಂಬಂಧಿಸಿದ ವರದಿಯನ್ನು ಯಾರೂ ಒಪ್ಪಲಿಲ್ಲ. ಆ ವರದಿ ಜಾರಿಯಾಗಿದ್ದರೆ ಸ್ಥಳೀಯರಿಗೆ ಆಹಾರ, ನೀರು, ದೊರೆಯುತ್ತಿತ್ತು. ಜನಪರ ವರದಿಯನ್ನು ಗಣಿಗಾರಿಕೆ ಮಾಡುವವರು ವಿರೋಧಿಸಿದ್ದರು’ ಎಂದು ಸ್ಮರಿಸಿದರು.

ಪತ್ರಕರ್ತ ನಾಗೇಶ ಹೆಗಡೆ ಮಾತನಾಡಿ, ‘ಮಾಧವ ಗಾಡ್ಗೀಳ್‌ ಅವರು ರೈತರು, ಮೀನುಗಾರರು, ಆದಿವಾಸಿಗಳೊಂದಿಗೆ ಕಾರ್ಯನಿರ್ವಹಿಸಿದ್ದರು. ಪ್ರಧಾನಮಂತ್ರಿಯವರ ವಿಜ್ಞಾನ ಸಲಹಾ ಮಂಡಳಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಆದರೆ, ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಕೇವಲ 40 ಜನ ಮಾತ್ರ ಪಾಲ್ಗೊಂಡಿದ್ದರು. ಯಾವುದೇ ಮಂತ್ರಿಗಳು, ಜನಪ್ರತಿನಿಧಿಗಳು ಭಾಗವಹಿಸಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.