ADVERTISEMENT

‘ಕೆಲ ಅಧಿಕಾರಿಗಳಿಗೆ ಪ್ರಚಾರದ ಗೀಳು; ‘ಲೈಕ್’ ಸಿಗದಿದ್ದರೆ ಖಿನ್ನತೆ’

ದಿವಂಗತ ಮಧುಕರ್ ಶೆಟ್ಟಿ ನೆನೆದ ಸಹೋದ್ಯೋಗಿಗಳು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 21:26 IST
Last Updated 17 ಡಿಸೆಂಬರ್ 2021, 21:26 IST
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಧುಕರ ಶೆಟ್ಟಿ ಅವರ ಭಾವಚಿತ್ರಕ್ಕೆ ನಿವೃತ್ತ ನ್ಯಾಯಮೂರ್ತಿ ಎನ್‌.ಕೆ. ಸುಧೀಂದ್ರ ರಾವ್, ಎಡಿಜಿಪಿ ಜೆ. ಅರುಣ್ ಚಕ್ರವರ್ತಿ ಹಾಗೂ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರು ಪುಷ್ಪನಮನ ಸಲ್ಲಿಸಿದರು ಪ್ರಜಾವಾಣಿ ಚಿತ್ರ
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಧುಕರ ಶೆಟ್ಟಿ ಅವರ ಭಾವಚಿತ್ರಕ್ಕೆ ನಿವೃತ್ತ ನ್ಯಾಯಮೂರ್ತಿ ಎನ್‌.ಕೆ. ಸುಧೀಂದ್ರ ರಾವ್, ಎಡಿಜಿಪಿ ಜೆ. ಅರುಣ್ ಚಕ್ರವರ್ತಿ ಹಾಗೂ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರು ಪುಷ್ಪನಮನ ಸಲ್ಲಿಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಇಂದಿನ ಕೆಲ ಅಧಿಕಾರಿಗಳು, ಪ್ರಚಾರದ ಹಿಂದೆ ಬಿದ್ದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮದೇ ಫೋಟೊ ಹಾಗೂ ವಿಡಿಯೊ ಅಪ್‌ಲೋಡ್ ಮಾಡುವ ಅವರೆಲ್ಲ, ‘ಲೈಕ್’ ಬಾರದಿದ್ದರೆ ಖಿನ್ನತೆಗೆ ಒಳಗಾದಂತೆ ವರ್ತಿಸುತ್ತಿದ್ದಾರೆ’ ಎಂದು ಆಂತರಿಕ ಭದ್ರತಾ ಪಡೆಯ (ಐಎಸ್‌ಡಿ) ಎಡಿಜಿಪಿ ಜೆ. ಅರುಣ್ ಚಕ್ರವರ್ತಿ ಹೇಳಿದರು.

ನಗರದ ‘ದಿ ಚಾನ್ಸೆಲರಿ’ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ಐಪಿಎಸ್ ಅಧಿಕಾರಿ ದಿವಂಗತ ಕೆ. ಮಧುಕರ್ ಶೆಟ್ಟಿ ಅವರ ಜನ್ಮ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಣ್ಣ ವಯಸ್ಸಿನಲ್ಲೇ ಪ್ರಚಾರ ಬಯಸದೇ ಜನ ಮೆಚ್ಚುವ ಕೆಲಸ ಮಾಡಿದ ಮಧುಕರ್ ಶೆಟ್ಟಿ, ಇಂದಿನ ಪ್ರತಿಯೊಬ್ಬ ಅಧಿಕಾರಿಗಳಿಗೆ ಮಾದರಿ. ಅಭಿಮಾನಿಗಳು ಹಾಗೂ ಸಹೋದ್ಯೋಗಿಗಳ ಮನದಲ್ಲಿ ಅವರು ಅಜರಾಮರ. ಪ್ರತಿ ವರ್ಷವೂ ಅವರ ಜನ್ಮದಿನವನ್ನೂ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು’ ಎಂದರು.

ADVERTISEMENT

‘ಪದವಿ ವ್ಯಾಸಂಗದ ಅವಧಿಯಿಂದಲೂ ಮಧುಕರ್ ಶೆಟ್ಟಿ ಜೊತೆ ಒಡನಾಟ ಹೊಂದಿದ್ದೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರು, ಪ್ರತಿಯೊಂದು ವಿಷಯವನ್ನು ಬೇರೆಯವರಿಗಿಂತ ಭಿನ್ನವಾಗಿ ಆಳವಾಗಿ ತಿಳಿದುಕೊಳ್ಳುತ್ತಿದ್ದರು. ಅವರು ಭಾರತೀಯ ಪೊಲೀಸ್ ಸೇವೆಗೆ ಸೇರಿದ ಬಳಿಕ, ಹಗಲು–ರಾತ್ರಿ ಕೆಲಸ ಮಾಡುತ್ತಿದ್ದರು. ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಸೇವೆ ಸಲ್ಲಿಸುತ್ತಿದ್ದ ಅಧಿಕಾರಿ ಅವರಾಗಿದ್ದರು’ ಎಂದೂ ತಿಳಿಸಿದರು.

ಕಾಡಿನಲ್ಲಿ ಒಂಟಿಯಾಗಿ ಬಂದಿದ್ದ ಮಧುಕರ್: ಐಎಎಸ್ ಅಧಿಕಾರಿ ಹರ್ಷ ಗುಪ್ತ ಮಾತನಾಡಿ, ‘ಮಧುಕರ್ ಶೆಟ್ಟಿ ಜೊತೆ ಕೆಲಸ ಮಾಡಿದ್ದು ನನ್ನ ಅದೃಷ್ಟ. ಅವರ ಕೆಲಸದ ವೈಖರಿ ಮೆಚ್ಚುವಂಥದ್ದು. ಜೊತೆಯಲ್ಲಿ ಕೆಲಸ ಮಾಡದವರೂ ಮಧುಕರ ಅವರನ್ನು ಹೊಗಳುತ್ತಾರೆ’ ಎಂದರು.

‘ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಎಸ್ಪಿಯಾಗಿ ಮಧುಕರ್ ಶೆಟ್ಟಿ ಕೆಲಸ ಮಾಡುತ್ತಿದ್ದರು. ಮಲೆ ಮಹದೇಶ್ವರ ಬೆಟ್ಟದಲ್ಲಿದ್ದ ಅವರನ್ನು ಭೇಟಿಯಾಗಲು ಹೋಗಿದ್ದೆ. ಅಪಾಯಕಾರಿ ಕಾಡಿನಲ್ಲಿ ಮಧುಕರ್ ಶೆಟ್ಟಿ ಒಬ್ಬರೇ ಟಾಟಾ ಸುಮೊ ತೆಗೆದುಕೊಂಡು ನನ್ನನ್ನು ಕರೆದೊಯ್ಯಲು ಬಂದಿದ್ದರು. ಹೆದರಿಕೆಯಾಗುವುದಿಲ್ಲವೇ ? ಎಂದು ಕೇಳಿದಾಗ, ಕಾರಿನಲ್ಲಿದ್ದ ಎರಡು ಎಕೆ–47 ಗನ್ ತೋರಿಸಿದ್ದರು. ಯಾರಾದರೂ ದಾಳಿ ಮಾಡಿದರೆ, ಅವರ ವಿರುದ್ಧ ಹೋರಾಡಲೇ ಬೇಕಲ್ಲ ? ಎಂಬುದಾಗಿ ಹೇಳಿದ್ದರು’ ಎಂದು ಮಧುಕರ್ ಜೊತೆಗಿನ ದಿನಗಳನ್ನು ಹರ್ಷ ಮೆಲುಕು ಹಾಕಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಎನ್‌.ಕೆ. ಸುಧೀಂದ್ರ ರಾವ್, ‘ಸುದ್ದಿಗಾಗಿ ಸೇವೆ ಮಾಡದೇ, ಸದ್ದಿಲ್ಲದೇ ಸೇವೆ ಮಾಡಿದವರು’ ಎಂದರು.ಕಾರ್ಯಕ್ರಮದಲ್ಲಿ ಮಧುಕರ್ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.