ADVERTISEMENT

ಸದಾಶಿವ ಆಯೋಗದ ವರದಿ ಮಂಡಿಸಲು ಒತ್ತಾಯ

‘ಮೀಸಲಾತಿ, ಒಳಮೀಸಲಾತಿ ತಲ್ಲಣಗಳು – ಅವಲೋಕನ’ ಕುರಿತ ವಿಚಾರಸಂಕಿರಣ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 20:04 IST
Last Updated 5 ಜೂನ್ 2022, 20:04 IST
ವಿಚಾರ ಸಂಕಿರಣವನ್ನು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಶಾಸಕ ಡಾ.ಕೆ. ಅನ್ನದಾನಿ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ, ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಡಾ. ಬಾಬು ಜಗಜೀವನ್‌ರಾಮ ಅಧ್ಯಯನ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಗಂಗಾಧರಯ್ಯ ಇದ್ದಾರೆ. – ಪ್ರಜಾವಾಣಿ ಚಿತ್ರ
ವಿಚಾರ ಸಂಕಿರಣವನ್ನು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಶಾಸಕ ಡಾ.ಕೆ. ಅನ್ನದಾನಿ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ, ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಡಾ. ಬಾಬು ಜಗಜೀವನ್‌ರಾಮ ಅಧ್ಯಯನ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಗಂಗಾಧರಯ್ಯ ಇದ್ದಾರೆ. – ಪ್ರಜಾವಾಣಿ ಚಿತ್ರ   

ಬೆಂಗಳೂರು: ’ರಾಜಕೀಯ ಪಕ್ಷಗಳು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅಧಿಕಾರಕ್ಕೇರಲು ಮೆಟ್ಟಿಲು ಮಾಡಿಕೊಂಡಿವೆಯೇ ಹೊರತು ಅನುಷ್ಠಾನಗೊಳಿಸಲು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ’ ಎಂದು ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ ಕಿಡಿಕಾರಿದರು.

ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಮತ್ತು ಮಾದಿಗ ಮಾನವ ಹಕ್ಕುಗಳ ವೇದಿಕೆ ಭಾನುವಾರ ಜಂಟಿಯಾಗಿ ಆಯೋಜಿಸಿದ್ದ ‘ಮೀಸಲಾತಿ ಮತ್ತು ಒಳಮೀಸಲಾತಿ ತಲ್ಲಣಗಳು–ಅವಲೋಕನ’ ಕುರಿತ ವಿಚಾರಸಂಕಿರಣದಲ್ಲಿ ಅವರು ಒಳಮೀಸಲಾತಿ ಕುರಿತ ಹೋರಾಟದ ಹಾದಿಯನ್ನು ವಿಶ್ಲೇಷಿಸಿದರು.

‘ಸುಮಾರು 32 ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ನಡೆಯುತ್ತಿದ್ದರೂ ಫಲ ದೊರೆತಿಲ್ಲ. ಸಮಗ್ರವಾಗಿ ಸಿದ್ಧಪಡಿಸಿರುವ ಸದಾಶಿವ ಆಯೋಗದ ವರದಿಯನ್ನು ಮೊದಲು ವಿಧಾನಸಭೆಯಲ್ಲಿ ಮಂಡಿಸಿ ಚರ್ಚೆ ನಡೆಸಬೇಕು. ವರದಿಯನ್ನು ತಿರಸ್ಕರಿಸುವ ನಿರ್ಣಯವನ್ನಾದರೂ ಕೈಗೊಳ್ಳಲಿ’ ಎಂದರು.

ADVERTISEMENT

‘ಒಳಮೀಸಲಾತಿಗಾಗಿ ಹೋರಾಟವನ್ನು ಜೀವಂತವಾಗಿಡುವ ಅಗತ್ಯವಿದೆ. ಮುಂಬರುವ 75ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನದಂದೇ ದೇಶದ ಗಮನಸೆಳೆಯುವ ನಿಟ್ಟಿನಲ್ಲಿ ಹೋರಾಟ ರೂಪಿಸುವುದು ಅಗತ್ಯವಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲೇ ಒಳಮೀಸಲಾತಿ ಹೆಚ್ಚು ಅಗತ್ಯವಿರುವುದರಿಂದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡಿನಲ್ಲಿ ಒಂದೇ ದಿನ ಈಹೋರಾಟ ತೀವ್ರ ಸ್ವರೂಪದಲ್ಲಿ ನಡೆಯಬೇಕು’ ಎಂದು ಸಲಹೆ ನೀಡಿದರು.

‘ಆರ್‌ಎಸ್‌ಎಸ್ ಮುಖಂಡರು ಬಿಜೆಪಿ ಮನವೊಲಿಸಿ ವರದಿ ಜಾರಿಗೊಳಿಸುವ ನಂಬಿಕೆ ಇತ್ತು. ಈ ಬಗ್ಗೆ ಚರ್ಚಿಸಲು ಸಮುದಾಯದ ಕೆಲವು ನಾಯಕರು ಕೇಶವಕೃಪಾಕ್ಕೂ ಹೋಗಿದ್ದರು. ಇದು ಸಾಮಾಜಿಕ ನ್ಯಾಯದ ಪ್ರಶ್ನೆಯಾಗಿದ್ದರಿಂದ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಒಟ್ಟಾರೆಯಾಗಿ ವಿಶ್ಲೇಷಿಸಿದಾಗ ಮಾದಿಗ ಸಮುದಾಯ ಒಂದು ರಾಜಕೀಯ ಪಕ್ಷವನ್ನು ಗೆಲ್ಲಿಸಬಹುದು ಅಥವಾ ಸೋಲಿಸಬಹುದು ಎನ್ನುವುದು ರಾಜಕೀಯ ಪಕ್ಷಗಳಿಗೆ ಮನವರಿಕೆಯಾಗಿದೆ’ ಎಂದು ವಿವರಿಸಿದರು.

‘ರಾಜಕೀಯವಾಗಿ ಅಸಂಘಟಿತ ವಾಗಿರುವುದರಿಂದ ಮಾದಿಗ ಸಮುದಾಯವು ತನ್ನ ಹಿತಾಸಕ್ತಿಯನ್ನೇ ಬಲಿ ಕೊಡುತ್ತಿದೆ. ರಾಜ್ಯ ಸರ್ಕಾರಗಳು ನಿರಾಸಕ್ತಿ ವಹಿಸಿದ್ದರಿಂದ ವರದಿ ಅನುಷ್ಠಾನವಾಗುತ್ತಿಲ್ಲ. ಈಗ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ರಾಜಕೀಯ ಪಕ್ಷಗಳು ಬೇಡಿಕೆ ಈಡೇರಿಸುವ ಭರವಸೆಗಳನ್ನು ನೀಡುತ್ತಿವೆ’ ಎಂದರು.

ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಮಾತನಾಡಿ, ‘ನಮ್ಮ ಶ್ರಮಕ್ಕೆ ಇನ್ನೂ ಪ್ರತಿಫಲ ದೊರೆತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಲಂಬಾಣಿ, ಭೋವಿ ಸಮುದಾಯಗಳ ಮನವೊಲಿಸಬೇಕು’
‘ಒಳ ಮೀಸಲಾತಿ ಬಗ್ಗೆ ಭೋವಿ ಮತ್ತು ಲಂಬಾಣಿ ಸಮುದಾಯಗಳಲ್ಲಿ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ. ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ತಮ್ಮನ್ನು ಕೈಬಿಡಲಾಗುತ್ತದೆ ಎನ್ನುವ ಆತಂಕ ಈ ಸಮುದಾಯದವರಲ್ಲಿದೆ. ಹೀಗಾಗಿ, ಈ ಆತಂಕ ನಿವಾರಿಸಬೇಕಾಗಿದೆ’ ಎಂದು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

‘ಎಲ್ಲ ಸಮುದಾಯಗಳ ಮುಖಂಡರ ಜತೆ ಚರ್ಚಿಸಿ ತಪ್ಪು ಅಭಿಪ್ರಾಯಗಳನ್ನು ನಿವಾರಿಸಿ, ವಿಶ್ವಾಸಗಳಿಸಬೇಕು. ಮಾದಿಗ ಸಮುದಾಯಕ್ಕೆ ನ್ಯಾಯಸಮ್ಮತವಾಗಿ ದೊರೆಯಬೇಕಾದ ಮೀಸಲಾತಿ ಮಾತ್ರ ಪಡೆಯಲಾಗುತ್ತಿದೆ ಎನ್ನುವ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕಾಗಿದೆ’ ಎಂದು ಸಲಹೆ ನೀಡಿದರು.

‘ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ 101 ಸಮುದಾಯಗಳಲ್ಲಿ ಕೇವಲ ಒಂದು ಸಮುದಾಯ ಮಾತ್ರ ಒಳಮೀಸಲಾತಿ ಕೇಳುತ್ತಿದೆ. ಇದರಿಂದ, ಉಳಿದ 100 ಸಮುದಾಯಗಳ ವಿರೋಧ ಎದುರಿಸಬೇಕಾಗುತ್ತದೆ ಎನ್ನುವ ಅಭಿಪ್ರಾಯವೂ ರಾಜಕೀಯ ಪಕ್ಷಗಳಲ್ಲಿದೆ. ಸಮುದಾಯದ ನಾಯಕರು ಒಳಮೀಸಲಾತಿಯ ಅಗತ್ಯತೆ ಕುರಿತು ಮನವರಿಕೆ ಮಾಡಬೇಕು’ ಎಂದರು.

*
ವರದಿ ಅನುಷ್ಠಾನಕ್ಕೆ ಸಮುದಾಯದ ಶಾಸಕರು ಹೋರಾಟ ಮಾಡಬೇಕು. ಸರ್ಕಾರ ಶ್ರೀಮಂತರ ಪರವಾಗಿದೆ. ಸರ್ಕಾರ ನಮ್ಮದಾಗಬೇಕು. ಸದಾಶಿವ ವರದಿ ಜಾರಿಗೆ ಉಗ್ರ ಹೋರಾಟ ಮಾಡಬೇಕು.
-ಮಾರಸಂದ್ರ ಮುನಿಯಪ್ಪ, ಬಿಎಸ್‌ಪಿ ರಾಜ್ಯ ಉಸ್ತುವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.