ADVERTISEMENT

ಸ್ನೇಹಿತೆಯ ಪ್ರಜ್ಞೆ ತಪ್ಪಿಸಿ ಮಗು ಅಪಹರಿಸಿದ್ದ

ಕಾಮಾಕ್ಷಿಪಾಳ್ಯ ಪೊಲೀಸರಿಂದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 27 ಮೇ 2019, 19:20 IST
Last Updated 27 ಮೇ 2019, 19:20 IST
   

ಬೆಂಗಳೂರು: ಸ್ನೇಹಿತೆಯ ಪ್ರಜ್ಞೆ ತಪ್ಪಿಸಿ ಅವರ 11 ತಿಂಗಳ ಮಗುವನ್ನು ಅಪಹರಿಸಿದ್ದ ಆರೋಪದಡಿ ಜಾನ್ (35) ಎಂಬಾತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

‘ರಾಮಮೂರ್ತಿನಗರದ ಜಾನ್, ಸುಂಕದಕಟ್ಟೆ ನಿವಾಸಿ ಕುಮಾರ್ ದಂಪತಿಯ ಮಗುವನ್ನು ಅಪಹರಿಸಿದ್ದ. ಆ ಸಂಬಂಧ ದಾಖಲಾಗಿದ್ದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದ್ದು, ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.

ಎರಡು ವರ್ಷಗಳಿಂದ ಸ್ನೇಹಿತ: ‘ನಗರದ ಕಂಪನಿಯೊಂದರಲ್ಲಿ ಮೇಲ್ವಿಚಾರಕರಾಗಿ ಕುಮಾರ್ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿಗೂ ಆರೋಪಿ ಜಾನ್‌ಗೂ ಎರಡು ವರ್ಷಗಳ ಹಿಂದೆ ಪರಿಚಯವಾಗಿತ್ತು. ಆಗಾಗ ಮನೆಗೂ ಬಂದು ಹೋಗುತ್ತಿದ್ದ. ಅವರಿಬ್ಬರ ನಡುವೆ ಸಲುಗೆಯೂ ಬೆಳೆದಿತ್ತು’ ಎಂದು ವಿವರಿಸಿದರು.

ADVERTISEMENT

‘ಮೇ 24ರಂದು ಬೆಳಿಗ್ಗೆ ಮನೆಗೆ ಹೋಗಿದ್ದ ಜಾನ್, ‘ನೀನು ದಪ್ಪ ಇದ್ದಿಯಾ, ತೆಳ್ಳಗೆ ಆಗಲು ಔಷಧಿ ತಂದಿದ್ದೇನೆ’ ಎಂದು ಹೇಳಿ ಕುಮಾರ್ ಅವರ ಪತ್ನಿಗೆ ಕುಡಿಸಿದ್ದ. ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಮಗುವನ್ನು ಎತ್ತಿಕೊಂಡು ಆರೋಪಿ ಪರಾರಿಯಾಗಿದ್ದ.’

‘ಕೆಲಸ ಮುಗಿಸಿ ಕುಮಾರ್ ಸಂಜೆ ಮನೆಗೆ ಬಂದಾಗ ಮಗು ಇರಲಿಲ್ಲ. ಪ್ರಜ್ಞೆ ತಪ್ಪಿ ಬಿದ್ದಿದ್ದ ಪತ್ನಿಯನ್ನು ಎಚ್ಚರಿಸಿ ಕೇಳಿದಾಗ, ‘ಮನೆಗೆ ಬಂದಿದ್ದ ಜಾನ್, ಮತ್ತು ಬರುವ ಔಷಧಿ ಕುಡಿಸಿ ಪ್ರಜ್ಞೆ ತಪ್ಪಿಸಿ ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾನೆ’ ಎಂದು ಹೇಳಿದ್ದರು. ಗಾಬರಿಗೊಂಡ ಕುಮಾರ್, ಠಾಣೆಗೆ ಬಂದು ದೂರು ಕೊಟ್ಟಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಆರೋಪಿಯು ರಾಮಮೂರ್ತಿನಗರದಲ್ಲಿ ಇರುವ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋಗಿ ಮಗುವನ್ನು ರಕ್ಷಿಸಿ, ಆತನನ್ನು ಬಂಧಿಸಲಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.