ADVERTISEMENT

Maha Shivratri: ಬೆಂಗಳೂರಿನಾದ್ಯಂತ ಭಕ್ತಿ ಭಾವದಿಂದ ಶಿವನಾಮ ಸ್ಮರಣೆ

ದೇವಾಲಯಗಳಲ್ಲಿ ವಿಶೇಷ ಅಲಂಕಾರ–ಪೂಜೆ: ಮಹಾಶಿವರಾತ್ರಿ ಪ್ರಯುಕ್ತ ಭಕ್ತರಿಂದ ಜಾಗರಣೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 16:30 IST
Last Updated 15 ಫೆಬ್ರುವರಿ 2026, 16:30 IST
ಕುರುಬರಹಳ್ಳಿಯ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶಿವನ ವಿಗ್ರಹಕ್ಕೆ ನಮಿಸಿದ ಭಕ್ತರು
ಕುರುಬರಹಳ್ಳಿಯ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶಿವನ ವಿಗ್ರಹಕ್ಕೆ ನಮಿಸಿದ ಭಕ್ತರು   

ಬೆಂಗಳೂರು: ಮಹಾಶಿವರಾತ್ರಿ ಪ್ರಯುಕ್ತ ದೇವಾಲಯಗಳಲ್ಲಿ ಈಶ್ವರನಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದರೆ, ಭಕ್ತರು ‘ಓಂ ನಮಃ ಶಿವಾಯ’ ಜಪ ಪಠಿಸುವ ಮೂಲಕ ಮಹಾದೇವನನ್ನು ಆರಾಧಿಸಿದರು. 

ಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ಭಾನುವಾರ ಮುಂಜಾನೆಯಿಂದ ಸಂಜೆಯವರೆಗೂ ವಿಶೇಷ ಪೂಜೆಗಳು ನಡೆದವು. ಜನರು ಶ್ರದ್ಧಾ ಭಕ್ತಿಯಿಂದ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಭಕ್ತಿಭಾವದಿಂದ ಶಿವಲಿಂಗಕ್ಕೆ ಕ್ಷೀರಾಭಿಷೇಕ ನೆರವೇರಿಸಿದರು. ಕೆಲ ದೇಗುಲಗಳಲ್ಲಿ ಮುಂಜಾನೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದರು. ಹೂವಿನ ಅಲಂಕಾರ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಮಹಾಲಕ್ಷ್ಮೀ ಹೋಮ, ವಿಶೇಷ ರುದ್ರ ಹೋಮ, ಸಹಸ್ರ ಬಿಲ್ವಾರ್ಚನೆ ಮಹಾ ಮಂಗಳಾರತಿ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆದವು.

ಯಶವಂತಪುರದಲ್ಲಿರುವ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಶಿವಲಿಂಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು

ಗವಿಪುರದ ಗವಿಗಂಗಾಧರೇಶ್ವರ ದೇವಾಲಯ, ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಾಲಯ, ಟೆಂಪಲ್‌ ಸ್ಟ್ರೀಟ್‌ನ ದಕ್ಷಿಣಮುಖ ನಂದಿ ತೀರ್ಥ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಜರಗನಹಳ್ಳಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ, ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ, ಕೋಣನಕುಂಟೆಯ ಚಂದ್ರಚೂಡೇಶ್ವರ ದೇವಸ್ಥಾನ, ಬಸವನಗುಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಚಾಮರಾಜಪೇಟೆಯ ಮಲೆ ಮಹದೇಶ್ವರ ದೇವಸ್ಥಾನ, ಹಳೆ ವಿಮಾನ ನಿಲ್ದಾಣ ರಸ್ತೆಯ ಮುರುಗೇಶ ಪಾಳ್ಯದ ಶಿವೋಹಂ ಶಿವ ದೇವಸ್ಥಾನ, ಕೋಟೆ ಜಲಕಂಠೇಶ್ವರ ದೇವಸ್ಥಾನ ಸೇರಿ ಸೇರಿ ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ADVERTISEMENT

ದರ್ಶನಕ್ಕೆ ನೂಕುನುಗ್ಗಲು: ಕೆಲವು ದೇವಸ್ಥಾನಗಳಲ್ಲಿ ಪ್ರಸಾದ ವಿನಿಯೋಗ ನಡೆಯಿತು. ಸರದಿಯಲ್ಲಿ ನಿಂತು ಭಕ್ತರು ಪ್ರಸಾದ ಸೇವಿಸಿದರು. ದೇಗುಲಗಳಲ್ಲಿ ದರ್ಶನಕ್ಕೆ ನೂಕುನುಗ್ಗಲು ಸಹ ಇತ್ತು. ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಹೂವಿನಲ್ಲಿ ಮಾಡಿದ ಬೃಹದಾಕಾರದ ಶಿವಲಿಂಗ ಆಕರ್ಷಣೆಯ ಕೇಂದ್ರವಾಗಿತ್ತು.

ಪ್ರಮುಖ ದೇವಾಲಯಗಳಲ್ಲಿ ರಾತ್ರಿ ಜಾಗರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಜಾಗರಣೆ ಅಂಗವಾಗಿ ನಾಟಕೋತ್ಸವ, ಸಂಗೀತೋತ್ಸವ, ಕಾವ್ಯೋತ್ಸವ ಆಯೋಜಿಸಲಾಗಿತ್ತು. ದೀಪೋತ್ಸವ ವಿಶೇಷ ಮೆರುಗು ನೀಡಿತು. ಕತ್ತಲು ಆವರಿಸುತ್ತಿದ್ದಂತೆ ಶಿವನ ಆರಾಧನೆಯ ತಾಣಗಳು ವಿದ್ಯುತ್‌ ದೀಪಗಳಿಂದ ಕಂಗೊಳಿಸಿದವು. ತಳಿರು, ತೋರಣಗಳು ಮಹಾಶಿವರಾತ್ರಿ ಮೆರುಗು ಹೆಚ್ಚಿಸಿದವು.

ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಿತು
ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಹೂವಿನಲ್ಲಿ ನಿರ್ಮಿಸಿದ್ದ ಶಿವಲಿಂಗ ಆಕರ್ಷಣೆಯ ಕೇಂದ್ರವಾಗಿತ್ತು

ಭಜನೆ ಪ್ರವಚನ

ಜಾಗರಣೆ ಪ್ರಯುಕ್ತ ವಿವಿಧ ಸಂಘ– ಸಂಸ್ಥೆಗಳು ಹಾಗೂ ದೇವಾಲಯಗಳು ಭಾನುವಾರ ಸಂಜೆಯಿಂದ ಸೋಮವಾರ ಮುಂಜಾನೆವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದವು.

ಶೃಂಗೇರಿ ಶಂಕರಮಠ ಸೃಷ್ಟಿ ಕೇಂದ್ರ ಮತ್ತು ರೋಟರಿ ಡಿಸ್ಟ್ರಿಕ್ಟ್ 3191 ಜಂಟಿಯಾಗಿ ಶಂಕರಪುರದ ಶೃಂಗೇರಿ ಮಠದಲ್ಲಿ ಅಹೋರಾತ್ರಿ ಶಿವರಾತ್ರಿ ಸಂಗೀತ–ನೃತ್ಯ ಉತ್ಸವ ನಡೆಸಿದವು.  ರಾಜಾಜಿನಗರದ ವ್ಯಾಸರಾಜ ಮಠದಲ್ಲಿ ದಾಸರ ಪದಗಳ ಗಾಯನ ನಡೆಯಿತು. ತ್ಯಾಗರಾಜನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಸಂಧ್ಯಾ ಶ್ರೀನಾಥ್ ಮತ್ತು ತಂಡದಿಂದ ದಾಸವಾಣಿ ಗಾಯನ ನಡೆಯಿತು.

ಆರ್ಟ್‌ ಆಫ್‌ ಲಿವಿಂಗ್‌ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಶ್ರೀಶ್ರೀ ರವಿಶಂಕರ್ ಗುರೂಜಿ ಅವರೊಂದಿಗೆ ಮಹಾಶಿವರಾತ್ರಿ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ರುದ್ರ ಪೂಜೆ ಧ್ಯಾನ ಭಜನೆ ಮಹಾರುದ್ರ ಪೂಜೆ ಪ್ರವಚನ ನಡೆಯಿತು. 

ಮಲ್ಲತ್ತಹಳ್ಳಿ ಮೈದಾನದಲ್ಲಿ ನಡೆದ ಶಿವರಾತ್ರಿ ಹಬ್ಬದ ಆಚರಣೆಯಲ್ಲಿ ನಂದಿ ಮೇಲೆ ಕುಳಿತ ಶಿವನ ವಿಗ್ರಹ ಗಮನಸೆಳೆಯಿತು

ನಾಟಕ–ಯಕ್ಷಗಾನ ಪ್ರದರ್ಶನ

ಶಿವರಾತ್ರಿ ಪ್ರಯುಕ್ತ ನಗರದ ವಿವಿಧೆಡೆ ನಾಟಕ ಹಾಗೂ ಯಕ್ಷಗಾನಗಳು ಪ್ರದರ್ಶನಗೊಂಡವು. ಸುಸ್ಥಿರ ಪ್ರತಿಷ್ಠಾನವು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ಮಹಾಯುಗ’ ನಾಟಕ ಪ್ರದರ್ಶನ ಹಮ್ಮಿಕೊಂಡಿತ್ತು. ಬ್ರಹ್ಮಶ್ರೀ ಕಲಾವೇದಿಕೆ ವತಿಯಿಂದ ಚನ್ನಸಂದ್ರದ ಮುನೇಶ್ವರ ದೇವಸ್ಥಾನದಲ್ಲಿ ‘ಬೇಡರ ಕಣ್ಣಪ್ಪ ಶ್ವೇತಕುಮಾರ ಚರಿತ್ರೆ’ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿತ್ತು. ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆಯಿಂದ ನಾಗಶೆಟ್ಟಿಹಳ್ಳಿಯ ಈಶ್ವರ ದೇವಸ್ಥಾನದ ಬಳಿ ‘ಶ್ರೀಕೃಷ್ಣಸಂಧಾನ’ ನಾಟಕ ಪ್ರದರ್ಶನ ನಡೆಯಿತು.  

ಗವಿಪುರದಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ನೂಕುನುಗ್ಗಲಿನಲ್ಲಿಯೇ ದೇವರ ದರ್ಶನ ಪಡೆದರು –ಪ್ರಜಾವಾಣಿ ಚಿತ್ರ/ರಂಜು ಪಿ

ರಾತ್ರಿಯಿಡೀ ‘ಕಾವ್ಯ ಶಿವರಾತ್ರಿ

ಜನಸಂಸ್ಕೃತಿ ಪ್ರತಿಷ್ಠಾನ ಕಾವ್ಯಮಂಡಲ ಹಾಗೂ ರಾಮನಗರದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಜಂಟಿಯಾಗಿ ಜ್ಞಾನಭಾರತಿ ಆವರಣದಲ್ಲಿರುವ ಡಾ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಕಾವ್ಯ ಶಿವರಾತ್ರಿ ಆಯೋಜಿಸಿದ್ದವು. ಅಹೋರಾತ್ರಿ ಕಾವ್ಯ ಗಾಯನ ನಡೆಯಿತು. ಅಲ್ಕೆರೆ ಶಿವಕುಮಾರ್ ಹಾಗೂ ಸಂಗಡಿಗರಿಂದ ಮಂಟೇಸ್ವಾಮಿ ಮತ್ತು ಮಲೆ ಮಹಾದೇಶ್ವರ ಮಹಾಕಾವ್ಯ ಗಾಯನ ಆಯೋಜಿಸಲಾಗಿತ್ತು.

ಹನುಮಂತ ನಗರದಲ್ಲಿರುವ ಶೇಷ ಮಹಾಬಲಮುರಿ ಗಣಪತಿ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡಲಾಯಿತು –ಪ್ರಜಾವಾಣಿ ಚಿತ್ರ/ರಂಜು ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.