
ಯಲಹಂಕ: ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ನೇತೃತ್ವದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಬಿಜಿ ಸ್ವಯಂಸೇವಕರ ಸಂಘದ ಆಶ್ರಯದಲ್ಲಿ ವಿದ್ಯಾರಣ್ಯಪುರದ ಎನ್‌ಟಿಐ ಮೈದಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ‘ಮಹಾಶಿವೋತ್ಸವ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಿವಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸ್ಥಳೀಯ ಕಲಾವಿದರಿಗಾಗಿ ಶಾಸ್ತ್ರೀಯ ನೃತ್ಯಸ್ಪರ್ಧೆ ಏರ್ಪಡಿಸಲಾಗಿತ್ತು. ದೃಷ್ಟಿ ಆರ್ಟ್ಸ್ ಸೆಂಟರ್ ವತಿಯಿಂದ ‘ಸತ್ಯಂ ಶಿವಂ ಸುಂದರಂ’ ಎಂಬ ನೃತ್ಯರೂಪಕ ನಾಟಕ ಪ್ರದರ್ಶನವು ಜನರ ಗಮನ ಸೆಳೆಯಿತು.
ಕೃಷ್ಣಬೈರೇಗೌಡ ಮಾತನಾಡಿ, ಕ್ಷೇತ್ರದಲ್ಲಿ ಎಲ್ಲ ಹಬ್ಬಗಳನ್ನು ವಿಶೇಷವಾಗಿ ಆಚರಿಸುವುದರ ಜೊತೆಗೆ ಶಿಕ್ಷಣದಲ್ಲಿ ಸಾಧನೆಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಪ್ರತಿಭಾ ಪುರಸ್ಕಾರ, ಕ್ರೀಡಾಕೂಟ ಸೇರಿದಂತೆ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಕೃಷ್ಣಬೈರೇಗೌಡ, ಪಾಲಿಕೆ ಮಾಜಿ ಸದಸ್ಯ ವಿ.ವಿ.ಪಾರ್ತಿಬರಾಜನ್, ಕಾಂಗ್ರೆಸ್ ಮುಖಂಡರಾದ ಎನ್.ಎನ್.ಶ್ರೀನಿವಾಸಯ್ಯ, ಎಂ. ಜಯಗೋಪಾಲಗೌಡ, ಟಿ.ಜಿ.ಚಂದ್ರು, ವಿ.ಹರಿ, ಆರ್.ಎಂ.ಶ್ರೀನಿವಾಸ್, ಬಿ.ಎಸ್.ಗೋಪಾಲಕೃಷ್ಣ, ಲಕ್ಷ್ಮೀಹರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.