ADVERTISEMENT

ಶಿವರಾತ್ರಿ: ದೇವಸ್ಥಾನಗಳಲ್ಲಿ ಮಾರ್ಷಲ್‌ಗಳ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 12:12 IST
Last Updated 11 ಮಾರ್ಚ್ 2021, 12:12 IST
ಮಡಿವಾಳದ ವೆಂಕಟ ಬಾಲಸುಬ್ರಹ್ಮಣ್ಯ ದೇವಸ್ಥಾನದ ಬಳಿ ಮಾರ್ಷಲ್‌ಗಳ ಕಣ್ಗಾವಲು
ಮಡಿವಾಳದ ವೆಂಕಟ ಬಾಲಸುಬ್ರಹ್ಮಣ್ಯ ದೇವಸ್ಥಾನದ ಬಳಿ ಮಾರ್ಷಲ್‌ಗಳ ಕಣ್ಗಾವಲು   

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿರುವುದು, ನಿರ್ದಿಷ್ಟ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಬಿಬಿಎಂಪಿಯು ಶಿವರಾತ್ರಿ ಸಂದರ್ಭದಲ್ಲಿ ಸೋಂಕು ಹರಡದಂತೆ ತಡೆಯಲು ವಿಶೇಷ ಕ್ರಮ ಕೈಗೊಂಡಿದೆ.

ದೇವಸ್ಥಾನಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಪೂಜೆ ಹಾಗೂ ಅಭಿಷೇಕಗಳ ಸಂದರ್ಭದಲ್ಲಿ ಭಕ್ತರು ಗುಂಪುಗೂಡದಂತೆ ತಡೆಯಲು ಹಾಗೂ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಪಾಲಿಕೆ ಮಾರ್ಷಲ್‌ಗಳನ್ನು ನಿಯೋಜಿಸಿದೆ.

ದೇವಸ್ಥಾನಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ಸಾಗಿ ದೇವರ ಮೂರ್ತಿಯ ದರ್ಶನ ಪಡೆಯುವಂತೆ ನೋಡಿಕೊಂಡರು. ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳುವಂತೆ ಹಾಗೂ ಸ್ಯಾನಿಟೈಸರ್‌ ಬಳಸಿ ಕೈತೊಳೆಯುವಂತೆ ಭಕ್ತರಿಗೆ ಸೂಚನೆ ನೀಡಿದರು. ದೇವಸ್ಥಾನಕ್ಕೆ ಬರುವ ಭಕ್ತರ ದೇಹದ ಉಷ್ಣಾಂಶ ಪರಿಶೀಲನೆಗೂ ಕೆಲವು ಕಡೆ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಚಾಮರಾಜಪೇಟೆಯ ಮಲೆಮಾದೇಶ್ವರ ದೇವಸ್ಥಾನ, ಶೆಟ್ಟಿ ಹಳ್ಳಿಯ ವಿಶ್ವೇಶ್ವರ ದೇವಸ್ಥಾನ, ಸುಬ್ಬಯ್ಯ ವೃತ್ತದ ಈಶ್ವರ ದೇವಸ್ಥಾನ, ಶಿವಾಜಿನಗರದ ಸೋಮೇಶ್ವರ ದೇವಸ್ಥಾನ, ಗೊಟ್ಟಿಗೆರೆಯ ಸೋಮೇಶ್ವರ ದೇವಸ್ಥಾನ, ಸುಂಕೇನಹಳ್ಳಿಯ ಮಹದೇಶ್ವರ ದೇವಸ್ಥಾನಗಳಲ್ಲಿ ಸುಭಾಸ್‌ನಗರದ ಕಾಶಿ ವಿಶ್ವನಾ ದೇವಸ್ಥಾನ, ಮಡಿವಾಳದ ವೆಂಕಟ ಬಾಲಸುಬ್ರಹ್ಮಣ್ಯ ದೇವಸ್ಥಾನ, ರಾಜಗೋಪಾಲನಗರದ ನೀಲಕಂಠೇಶ್ವರ ದೇವಸ್ಥಾನ, ಸೀತಾ ಸರ್ಕಲ್‌ನ ದೇವಸ್ಥಾನಗಳ ಬಳಿ ಮಾರ್ಷಲ್‌ಗಳನ್ನು ನೇಮಿಸಿರುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.