ADVERTISEMENT

ಮಹಾರಾಜ ಅಗ್ರಸೇನ ಆಸ್ಪತ್ರೆ: ರಾಷ್ಟ್ರೋತ್ಥಾನ ಪರಿಷತ್‌ನಿಂದ ಐಸಿಯು ಘಟಕ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 0:53 IST
Last Updated 12 ಅಕ್ಟೋಬರ್ 2021, 0:53 IST
ರಾಷ್ಟ್ರೋತ್ಥಾನ ಪರಿಷತ್‌ ಹಾಗೂ ಯುನಿಸಿಸ್‌ ವತಿಯಿಂದ ಸ್ಥಾಪಿಸಿರುವ ಐಸಿಯು ಘಟಕ 
ರಾಷ್ಟ್ರೋತ್ಥಾನ ಪರಿಷತ್‌ ಹಾಗೂ ಯುನಿಸಿಸ್‌ ವತಿಯಿಂದ ಸ್ಥಾಪಿಸಿರುವ ಐಸಿಯು ಘಟಕ    

ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್‌, ಯುನಿಸಿಸ್‌ ಇಂಡಿಯಾ ಸಹಭಾಗಿತ್ವದಲ್ಲಿ ಮಹಾರಾಜ ಅಗ್ರಸೇನ ಆಸ್ಪತ್ರೆಯಲ್ಲಿ 8 ಹಾಸಿಗೆ ಸಾಮರ್ಥ್ಯದ ಐಸಿಯು ಘಟಕ ಸ್ಥಾಪಿಸಿದ್ದು, ಇದನ್ನು ಸೋಮವಾರ ಹಸ್ತಾಂತರಿಸಲಾಯಿತು.

‘ಆರೋಗ್ಯಪೂರ್ಣ ಕರ್ನಾಟಕ ನಿರ್ಮಾಣ ಹಾಗೂ ರಾಜ್ಯದಲ್ಲಿ ಕೋವಿಡ್‌ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್‌, ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಐಸಿಯು ಘಟಕಗಳನ್ನು ತೆರೆಯಲು ಅನುವಾಗುತ್ತಿದೆ. ಕಳೆದ ನಾಲ್ಕು ತಿಂಗಳಿಂದ ಹಲವು ಕಾರ್ಪೊರೇಟ್‌ ಕಂಪನಿಗಳು ಹಾಗೂ ನಾಸ್ಕಾಂ ಫೌಂಡೇಷನ್‌ಗಳ ಸಹಯೋಗದಲ್ಲಿ ಒಟ್ಟು 5 ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಉಪಕರಣಗಳನ್ನೂ ಒದಗಿಸಲಾಗಿದೆ’ ಎಂದು ರಾಷ್ಟ್ರೋತ್ಥಾನ ಪರಿಷತ್‌ನ ಉಪಾಧ್ಯಕ್ಷ ಎ.ಆರ್‌.ದ್ವಾರಕಾನಾಥ್‌ ತಿಳಿಸಿದರು.

ಯುನಿಸಿಸ್‌ ಇಂಡಿಯಾ ಸಿಎಸ್‌ಆರ್‌ ಸಮಿತಿಯ ನಿರ್ದೇಶಕ ಶ್ರೀಕಾಂತ್‌ ರಾಘವನ್‌, ‘ಕೋವಿಡ್‌ ಸಮಯದಲ್ಲಿ ಆರೋಗ್ಯ ಕ್ಷೇತ್ರ ಬಲಪಡಿಸುವುದಕ್ಕೆ ನಾವು ಹೆಚ್ಚಿನ ಒತ್ತು ನೀಡಿದ್ದೇವೆ. ಭಾರತೀಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ರಾಷ್ಟ್ರೋತ್ಥಾನ ಪರಿಷತ್‌ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡುತ್ತೇವೆ’ ಎಂದರು.

ADVERTISEMENT

ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್‌ ಹೆಗ್ಡೆ, ‘ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಹಾಗೂ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂಬುದು ನಮ್ಮ ಆಶಯ. ಹೀಗಾಗಿ ಪರಿಷತ್‌ ವತಿಯಿಂದ 150 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದೇವೆ. ಅದಕ್ಕೆ ‘ಜಯದೇವ್‌ ಮೆಮೋರಿಯಲ್‌ ರಾಷ್ಟ್ರೋತ್ಥಾನ ಆಸ್ಪತ್ರೆ’ ಎಂದು ಹೆಸರಿಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.‌

ಸಿಎಸ್‌ಆರ್‌ ಮುಖ್ಯಸ್ಥ ಸುಮಿತಾ ದತ್, ಅಗರವಾಲ್‌ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಸತೀಶ್‌ ಜೈನ್‌, ಹಾಲಿ ಅಧ್ಯಕ್ಷ ರಾಜಕುಮಾರ್‌ ಕಂಡೊಯ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.