ADVERTISEMENT

ನಗರದೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 19:56 IST
Last Updated 4 ಮಾರ್ಚ್ 2019, 19:56 IST
ಶಿವರಾತ್ರಿ ನಿಮಿತ್ತ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸೋಮವಾರ ಭಕ್ತಾದಿಗಳು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು -ಪ್ರಜಾವಾಣಿ ಚಿತ್ರ
ಶಿವರಾತ್ರಿ ನಿಮಿತ್ತ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸೋಮವಾರ ಭಕ್ತಾದಿಗಳು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಾಂಪ್ರದಾಯಿಕ ಉಡುಗೆ ಉಟ್ಟು, ಕೈಯಲ್ಲಿ ಪೂಜಾ ಸಾಮಾನುಗಳ ಬುಟ್ಟಿ ಹಿಡಿದುಕೊಂಡು ಹಿರಿಯರು–ಕಿರಿಯರು ಎನ್ನದೇ ಬೆಳಗಿನ ಜಾವವೇ ಭಕ್ತಸಮೂಹ ದೇವಸ್ಥಾನದೆಡೆಗೆ ಹೆಜ್ಜೆ ಹಾಕುತ್ತಿತ್ತು.

ಮಹಾಶಿವರಾತ್ರಿ ನಿಮಿತ್ತ ಸೋಮವಾರ ಶಿವನ ದರ್ಶನ ಪಡೆಯಲು ಅವರೆಲ್ಲ ಕಾತುರರಾಗಿದ್ದರು.

ದೇವಸ್ಥಾನಗಳ ಬಾಗಿಲಲ್ಲಿ ತಳಿರು–ತೋರಣ, ಬಗೆಬಗೆಯ ಪುಷ್ಪಗಳ ಅಲಂಕಾರ, ಗರ್ಭಗುಡಿಯಲ್ಲಿ ಧೂಪದ ಘಮ, ಸಾಲುಸಾಲು ದೀಪಗಳು ಈಶ್ವರನ ಆರಾಧನೆಗೆ ಸಜ್ಜಾಗಿದ್ದವು. ಓಂ ನಮಃ ಶಿವಾಯ... ಮಂತ್ರನಿರಂತರವಾಗಿ ಕೇಳಿ ಬರುತ್ತಿತ್ತು.

ADVERTISEMENT

ಶಿವ ಸ್ವರೂಪಿ ಲಿಂಗಕ್ಕೆ ರುದ್ರಾಭಿಷೇಕ, ಶತ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಪೂರ್ವಕ ವಿಭೂತಿ ಅಭಿಷೇಕ,ಕ್ಷೀರಾಭಿಷೇಕ, ಜಲಾಭಿಷೇಕ ಹಾಗೂ ಶಿವಸಹಸ್ರನಾಮ ಪೂರ್ವಕ ಬಿಲ್ವಾರ್ಚನೆಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ವಿಶೇಷ ಪೂಜೆ, ಭಕ್ತಿ– ಗಾನಸುಧೆ ಮೊಳಗುತ್ತಿದ್ದಾಗ ಅಲ್ಲಲ್ಲಿ ಭಕ್ತರಿಂದ ಹರ ಹರ ಮಹಾದೇವ... ಎನ್ನುವ ಉದ್ಘೋಷಗಳು ಮೊಳಗುತ್ತಿದ್ದವು.‌ ಮಹಾಶಿವರಾತ್ರಿಯನ್ನು ಭಕ್ತಿ– ಭಾವ, ಸಂಭ್ರಮದಿಂದ ಆಚರಿಸಲಾಯಿತು.

ಗವಿ ಗಂಗಾಧರೇಶ್ವರನ ದರ್ಶನಕ್ಕಾಗಿಬೆಳಗಿನ ಜಾವವೇ ಭಕ್ತರು ಗವಿಪುರದ ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯದತ್ತ ಹೆಜ್ಜೆ ಹಾಕುತ್ತಿದ್ದರು.ಸಹಸ್ರಾರು ಸಂಖ್ಯೆಯ ಜನ ದರ್ಶನಕ್ಕಾಗಿ ಕಿಲೋ ಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದರು.

ಇಲ್ಲಿ, ಗಂಗಾಧರೇಶ್ವರನಿಗೆ ವಿಶೇಷ ಪೂಜೆ ನೇರವೇರಿತು. ಪಂಚಾಮೃತ, ಕ್ಷೀರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಹೊತ್ತೇರುತ್ತಿದ್ದಂತೆ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹನುಮನ ಬಾಲದಂತೆ ಬೆಳೆಯುತ್ತಲೆ ಇತ್ತು. ಸರತಿ ಸಾಲಿನಲ್ಲಿ ನಿಲ್ಲುವುದಕ್ಕಾಗಿ ನೆರಳಿನ (ಶಾಮಿಯಾನ)ವ್ಯವಸ್ಥೆ ಮಾಡಲಾಗಿತ್ತು. ನೂಕುನುಗ್ಗಲು ತಡೆಯಲು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.

ಜೆ.ಪಿ.ನಗರ 2ನೇ ಹಂತದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಜಯನಗರ ಮಹಾಶಿವರಾತ್ರಿ ಉತ್ಸವ’ ಆಯೋಜಿಸಲಾಗಿತ್ತು. ಭಕ್ತಿ ಹಾಗೂ ಭಾವಗೀತೆಗಳು, ವಾದ್ಯ ವೈಭವ, ನವರಸ ನಾಯಕ–ನಟರಾಜ, ಮೋಹಿನಿ ಭಸ್ಮಾಸುರ, ನಗೆಹೊನಲು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ದಾಳಿಂಬೆ, ಮಾವು, ದ್ರಾಕ್ಷಿ, ಮೆಕ್ಕೆಜೋಳದ ತೆನೆ ಹಾಗೂ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಹಲವೆಡೆ ವಚನಗಳ ಗಾಯನ, ಶಿವ ಸ್ಮರಣೆ, ಜಾಗರಣೆ ನಡೆದವು. ಪ್ರಸದಾದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಹಬ್ಬದ ನಿಮಿತ್ತ ಇನ್ನುಳಿದ ದೇವಸ್ಥಾನಗಳಲ್ಲೂ ಶಿವನ ಆರಾಧನೆ, ಅಲಂಕಾರ ಮಾಡಲಾಗಿತ್ತು.‌

ಮಲ್ಲೇಶ್ವರದಲ್ಲಿ ನಗೆ ಜಾಗರಣೆ

ಮಲ್ಲೇಶ್ವರದ ಜಾಣಜಾಣೆಯರ ನಗೆ ಜಾಗರಣೆ, ಶಿವರಾತ್ರಿ ನಿಮಿತ್ತ ಶಿರೂರು ಪಾರ್ಕ್‌ ಆಟದ ಮೈದಾನದಲ್ಲಿ ಸಂಜೆ‌ ‘ನಗೆ ಜಾಗರಣೆ’ ಕಾರ್ಯಕ್ರಮ ಆಯೋಜಿಸಿತ್ತು.

ಗಂಗಾವತಿ ಪ್ರಾಣೇಶ್‌, ಕಷ್ಣೇಗೌಡ, ಬಸವರಾಜ ಮಹಾಮನಿ ಅವರ ಮಾತುಗಳಿಗೆ ಭಕ್ತರು ಮನಬಿಚ್ಚಿ ನಕ್ಕರು. ಮಿಮಿಕ್ರಿ, ಭರತನಾಟ್ಯ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶಿವಲಿಂಗ ದರ್ಶನ

ಹನುಮಂತನಗರದ ಶೇಷ ಮಹಾಬಲಮುರಿ ಗಣಪತಿ ಸೇವಾ ಸಮಿತಿ ಟ್ರಸ್ಟ್ ಶಿವರಾತ್ರಿ ನಿಮಿತ್ತ ‘ಶಿವೋತ್ಸವಂ’, ‘ಶಿವಭಕ್ತ ಸರ್ವಶಕ್ತ’ ಹೆಸರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ನೂರಾರು ಶಿವಲಿಂಗಗಳು, ಶಿವನ ವಿವಿಧ ರೂಪಗಳ ದರ್ಶನ, ಕೈಲಾಸ ಪರ್ವತ ದರ್ಶನ ಪಡೆದು ಸಾವಿರಾರು ಭಕ್ತರು ಪುನೀತರಾದರು.

‘ಆದಿಯೋಗಿ ದಿವ್ಯ ದರ್ಶನಂ’ಉದ್ಘಾಟನೆ

ಈಶಾ ಫೌಂಡೇಷನ್ ಕೊಯಮತ್ತೂರಿನ ಕೇಂದ್ರದಲ್ಲಿ ಆಯೋಜಿಸಿದ್ದ ಶಿವರಾತ್ರಿ ಸಂಭ್ರಮಾಚರಣೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌, ‘ಆದಿಯೋಗಿ ದಿವ್ಯ ದರ್ಶನಂ’ ಧ್ವನಿ ಮತ್ತು ಬೆಳಕಿನ ಲೇಸರ್ ಪ್ರದರ್ಶನವನ್ನು ಉದ್ಘಾಟಿಸಿದರು.

‘ಪರರ ಸೇವೆಯಲ್ಲಿ ನಿರತರಾಗಿ ಬದುಕುವುದೆ ನಿಜವಾದ ಬಾಳು’ ಎಂದು ಅವರು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.