ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರನ್ನು ಅಮಾನತು ಮಾಡಿ, ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ‘ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ’ ಸಮಿತಿ ಆಗ್ರಹಿಸಿದೆ.
ಸಮಿತಿಯು ಭಾನುವಾರ ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶದಲ್ಲಿ ಈ ಸಂಬಂಧ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಕಸಾಪ ಅಧ್ಯಕ್ಷರ ವಿರುದ್ಧ ತನಿಖೆ ಮುಗಿಯುವವರೆಗೆ ವಾರ್ಷಿಕ ಸಭೆ ನಡೆಸದಂತೆ ನಿರ್ಬಂಧ ಹೇರಬೇಕು. ಸಹಕಾರ ಇಲಾಖೆ ಆರಂಭಿಸಿರುವ ತನಿಖೆಯನ್ನು ತ್ವರಿತಗೊಳಿಸಬೇಕು. ಕಸಾಪ ದಾಖಲೆಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು. ಆರೋಪಗಳ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂಬುದು ಇತರ ನಿರ್ಣಯಗಳಾಗಿವೆ.
ಸಾಮಾಜಿಕ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಮಾತನಾಡಿ, ‘ಸರ್ವಾಧಿಕಾರಿ ಧೋರಣೆ ತೋರುತ್ತಿರುವ ಮಹೇಶ ಜೋಶಿ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿ, ಕನ್ನಡಿಗರ ಬಳಿ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.
ಜೋಶಿ ವರ್ತನೆಯ ಹಿಂದೆ ರಾಜಕೀಯ ಷಡ್ಯಂತ್ರ ಹಾಗೂ ಜನವಿರೋಧಿ ಆರ್‌ಎಸ್‌ಎಸ್ ಕೈವಾಡ ಇದೆ. 2000ನೇ ಇಸವಿಯ ನಂತರ ಸಾಹಿತ್ಯ ಪರಿಷತ್ತು ಸಾಹಿತಿಗಳ, ಸೂಕ್ಷ್ಮ ಸಂವೇದನೆಯುಳ್ಳವರ ಕೈಯಲ್ಲಿ ಉಳಿದಿಲ್ಲ. ಬಂಡವಾಳಶಾಹಿಗಳ ಕೈಗೆ ಹೋಗಿದೆ. ಇಂಥ ಸಂದರ್ಭದಲ್ಲಿಯೇ ಪ್ರತಿ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಹಣ ಹಂಚಿ, ಜೋಶಿಯನ್ನು ಗೆಲ್ಲಿಸಿದ್ದಾರೆ ಎಂದು ಆರೋಪಿಸಿದರು.
ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ‘ಅಸಂಬದ್ಧವಾಗಿ, ಕಾನೂನುಬಾಹಿರವಾಗಿ ಕಸಾಪದಲ್ಲಿ ಆಗುವ ಬೈಲಾ ತಿದ್ದುಪಡಿ ನಿಲ್ಲಿಸಬೇಕು. ಪರಿಷತ್ತಿನ ಸರ್ವ ಸದಸ್ಯರು ಬೈಲಾ ತಿದ್ದುಪಡಿ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕು’ ಎಂದು ಆಗ್ರಹಿಸಿದರು.
ಎಸ್.ಜಿ. ಸಿದ್ದರಾಮಯ್ಯ, ಹಂಪ ನಾಗರಾಜಯ್ಯ, ಮಾವಳ್ಳಿ ಶಂಕರ್, ಕೆ.ಎಸ್. ವಿಮಲಾ, ಜಾಣಗೆರೆ ವೆಂಕಟರಾಮಯ್ಯ, ಬಿ. ಜಯಪ್ರಕಾಶ್ ಗೌಡ, ಬಂಜಗೆರೆ ಜಯಪ್ರಕಾಶ್, ಮೀರಾ ಶಿವಲಿಂಗಯ್ಯ. ಸಾ.ರಾ.ಗೋವಿಂದು, ಶಿವರಾಮೇಗೌಡ, ವಸುಂಧರಾ ಭೂಪತಿ, ಆರ್.ಜಿ. ಹಳ್ಳಿ ನಾಗರಾಜ್, ಸಿ.ಕೆ. ರಾಮೇಗೌಡ ಸೇರಿದಂತೆ ಸಮಿತಿಯ ಎಲ್ಲ ಸಂಚಾಲಕರು ಸರ್ಕಾರಕ್ಕೆ ಕಳುಹಿಸುವ ನಿರ್ಣಯಕ್ಕೆ ಸಹಿ ಹಾಕಿದರು.
ಮಹೇಶ್ ಜೋಶಿ ವಿರುದ್ಧ ಧಿಕ್ಕಾರದ ಘೋಷಣೆ ದಾಖಲೆ ತಿದ್ದಿ ಅಕ್ರಮವನ್ನು ಸಕ್ರಮ ಮಾಡುವ ಅಪಾಯವಿದೆ ತನಿಖೆ ಮುಕ್ತಾಯದವರೆಗೆ ಅಧ್ಯಕ್ಷರನ್ನು ಕಚೇರಿಯಿಂದ ದೂರವಿಡಲು ಆಗ್ರಹ
ನಿವೃತ್ತ ನ್ಯಾಯಮೂರ್ತಿಯವರನ್ನು ನೇಮಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ದುರಾಡಳಿತ ಆರ್ಥಿಕ ಅಶಿಸ್ತು ಹಾಗೂ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿಗಳು 6 ಉನ್ನತಾಧಿಕಾರಿಗಳ ತನಿಖಾ ತಂಡವನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ತನಿಖಾ ತಂಡಕ್ಕೆ ಮಾರ್ಗದರ್ಶನ ಮಾಡಲು ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರನ್ನು ನೇಮಿಸಬೇಕು ಎಂದು ಕನ್ನಡ ನಾಡು–ನುಡಿ ಜಾಗೃತಿ ಸಮಿತಿಯ ಸಂಚಾಲಕ ಜಾಣಗೆರೆ ವೆಂಕಟರಾಮಯ್ಯ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.