ಬೆಂಗಳೂರು: ರಾಜಧಾನಿಯ ವಾಣಿಜ್ಯ ಚಟುವಟಿಕೆಗಳ ಕೇಂದ್ರಗಳಲ್ಲಿ ಒಂದಾಗಿರುವ ಕಮರ್ಷಿಯಲ್ ಸ್ಟ್ರೀಟ್‌ಗೆ ಸಂಪರ್ಕ ಕಲ್ಪಿಸುವ ಮೇನ್ ಗಾರ್ಡ್ ರಸ್ತೆಯಲ್ಲಿ ಎರಡು ತಿಂಗಳ ಹಿಂದೆ ಆರಂಭಿಸಿದ್ದ ವೈಟ್ ಟಾಪಿಂಗ್ ಮತ್ತು ಕೊಳವೆ ಮಾರ್ಗದ ಕಾಮಗಾರಿ ಕುಂಟುತ್ತಾ ಸಾಗಿದೆ. ಇದರಿಂದ, ಇಲ್ಲಿನ ವ್ಯಾಪಾರ–ವಹಿವಾಟಿಗೆ ಪೆಟ್ಟು ಬಿದ್ದಿದ್ದು, ಈ ಬಾರಿಯ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಯ ಸಂಭ್ರಮ ಮಂಕಾಗಿದೆ !
ಶಿವಾಜಿನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಮೇನ್ ಗಾರ್ಡ್ ರಸ್ತೆಯ ದುಃಸ್ಥಿತಿಯಿಂದ ವ್ಯಾಪಾರ–ವಹಿವಾಟಿಗೆ ಅಡ್ಡಿಯಾಗುತ್ತಿದೆ. ವ್ಯಾಪಾರಿಗಳು, ಖರೀದಿಗೆ ಬರುವ ಗ್ರಾಹಕರು, ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ. ರಸ್ತೆಯ ಒಂದು ಬದಿಯನ್ನು ಅಗೆದು ಮಣ್ಣನ್ನು ಮುಖ್ಯರಸ್ತೆಯಲ್ಲಿ ಸುರಿಯಲಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಅಗೆದಿರುವುದರಿಂದ ವ್ಯಾಪಾರಿಗಳಿಗೂ, ಸಂಚರಿಸುವವರಿಗೂ ದೂಳಿನ ಮಜ್ಜನವಾಗುತ್ತಿದೆ.
‘ಇಲ್ಲಿ ಜವಳಿ, ಪಾದರಕ್ಷೆಗಳು, ಮಹಿಳೆಯರ ಆಲಂಕಾರಿಕ ವಸ್ತುಗಳ ಮಳಿಗೆಗಳಿವೆ. ಈ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳು ಸೇರಿದಂತೆ ಲಾರಿ, ದ್ವಿಚಕ್ರ ವಾಹನಗಳ ಸಂಚರಿಸುತ್ತವೆ. ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಪ್ರತಿನಿತ್ಯ ಸಂಚಾರ ದಟ್ಟಣೆ ಆಗುತ್ತಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವ ಕಾರಣ ಪ್ರತಿದಿನದ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ, ಜಲಮಂಡಳಿಯ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಇದರಿಂದ ಕಾಮಗಾರಿ ವಿಳಂಬವಾಗುತ್ತಿದೆ’ ಎಂದು ವ್ಯಾಪಾರಿಗಳು ದೂರಿದರು.
‘ರಸ್ತೆಯನ್ನು ಅಗೆದು, ಬೃಹತ್ ಪೈಪ್‌ಗಳನ್ನು ತಂದು ಇಡಲಾಗಿದೆ. ಆದರೆ, ಕಾಮಗಾರಿಗೆ ವೇಗ ಮಾತ್ರ ಸಿಕ್ಕಿಲ್ಲ. ಇನ್‌ಫೆಂಟ್ರಿ ರಸ್ತೆಯಿಂದ ಬರುವ ವಾಹನಗಳು ಮೇನ್ ಗಾರ್ಡ್ ಮುಖ್ಯರಸ್ತೆಯ ಮೂಲಕ ಕಮರ್ಷಿಯಲ್ ಸ್ಟ್ರೀಟ್ ತಲುಪುತ್ತವೆ. ವಾಹನಗಳು ಓಡಾಡಿದಾಗಲೆಲ್ಲ ದೂಳು ಆಲಂಕಾರಿಕ ವಸ್ತುಗಳ ಮೇಲೆ ಹರಡಿಕೊಳ್ಳುತ್ತದೆ. ಇದನ್ನು ಸ್ವಚ್ಛಗೊಳಿಸಲು ಕಾರ್ಮಿಕನೊಬ್ಬನ್ನು ನಿಯೋಜಿಸಿದ್ದೇನೆ. ಗ್ರಾಹಕರಿಲ್ಲದೇ ವ್ಯಾಪಾರ ಸಂಪೂರ್ಣ ಕುಸಿದಿದೆ. ತಿಂಗಳಿಗೆ ಪ್ರತಿ ಮಳಿಗೆಗೆ ₹80 ಸಾವಿರದಿಂದ ₹1 ಲಕ್ಷ ಬಾಡಿಗೆ ಇದೆ. ಕಾರ್ಮಿಕರ ವೇತನ ಹಾಗೂ ಮಳಿಗೆ ಬಾಡಿಗೆ ನೀಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬಟ್ಟೆ ಅಂಗಡಿ ವ್ಯಾಪಾರಿ ಅಬ್ದುಲ್ ಮತೀನ್ ಅಳಲು ತೋಡಿಕೊಂಡರು.
‘ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿ(ಬಿಡಬ್ಲ್ಯುಎಸ್‌ಎಸ್‌ಬಿ) ಸಿಬ್ಬಂದಿ ನಾನಾ ಕಾರಣಗಳಿಂದ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ. ರಸ್ತೆಯ ಸ್ಥಿತಿ ಹೀಗಿರುವುದರಿಂದ ಇಲ್ಲಿಗೆ ಖರೀದಿಗೆ ಬರುವ ಗ್ರಾಹಕರ ಸಂಖ್ಯೆ ತೀರಾ ವಿರಳವಾಗಿದೆ. ಈಗ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಸೇರಿದಂತೆ ವಾರಾಂತ್ಯದಲ್ಲಿ ಸಾವಿರಾರು ಗ್ರಾಹಕರನ್ನು ಸೆಳೆಯುತ್ತಿದ್ದ ಈ ಮಾರುಕಟ್ಟೆ ಈಗ ದಯನೀಯ ಸ್ಥಿತಿಗೆ ತಲುಪಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಜಲಮಂಡಳಿಯಿಂದ ಒಳಚರಂಡಿ ವ್ಯವಸ್ಥೆಗೆ ಕೊಳವೆ ಜೋಡಿಸುವ ಕಾಮಗಾರಿ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಕೊಳವೆ ಜೋಡಣೆ ಕಾಮಗಾರಿ ಪೂರ್ಣವಾಗಲಿದೆ’ ಎಂದು ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದರು.
ವ್ಯಾಪಾರಿಗಳು ಏನಂತಾರೆ!
ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಪ್ರತಿನಿತ್ಯ ದೂಳಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದ ಇಲ್ಲಿನ ವ್ಯಾಪಾರಿಗಳು ನಾನಾ ರೋಗಗಳಿಂದ ಬಳಲುತ್ತಿದ್ದಾರೆ. ರಸ್ತೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಶಾಸಕ ರಿಜ್ವಾನ್ ಅರ್ಷದ್ ಅವರಿಗೆ ಮನವಿ ಸಲ್ಲಿಸಲಾಗಿದೆ.–ಅಬ್ದುಲ್ ಮತೀನ್ ಬಟ್ಟೆ ವ್ಯಾಪಾರಿ
ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ ಅಗೆದು ಹಾಗಿಯೇ ಬಿಡಲಾಗಿದೆ. ಇದರಿಂದ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸ್ಥಳೀಯ ಶಾಸಕರು ನಮ್ಮ ಕಷ್ಟಗಳನ್ನು ಆಲಿಸುತ್ತಿಲ್ಲ. ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಬೇಕು.–ಅಬ್ದುಲ್ ರೆಹಮಾನ್ ಜ್ಯೂಸ್ ಅಂಗಡಿ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.