ADVERTISEMENT

ಮೇಕ್ ಇನ್ ಕರ್ನಾಟಕದ ಪೂಜಾ ಲೋಕ

ನಿರುದ್ಯೋಗಿ ಕನ್ನಡಿಗರಿಗೆ ಪ್ರಾಂಚೈಸಿ ನೀಡಲು ಯೋಜನೆ l 500ಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 21:55 IST
Last Updated 28 ಅಕ್ಟೋಬರ್ 2021, 21:55 IST
ಉತ್ಪನ್ನಗಳ ಪೊಟ್ಟಣದ ಮೇಲೆ ಆನೆ ಗುರುತಿನ ಮೇಕ್ ಇನ್ ಕರ್ನಾಟಕ ಲಾಂಛನ ಹಾಕಿರುವುದು
ಉತ್ಪನ್ನಗಳ ಪೊಟ್ಟಣದ ಮೇಲೆ ಆನೆ ಗುರುತಿನ ಮೇಕ್ ಇನ್ ಕರ್ನಾಟಕ ಲಾಂಛನ ಹಾಕಿರುವುದು   

ಬೆಂಗಳೂರು: ರಸ್ತೆ ಬದಿಯಲ್ಲಿ ಆರಂಭವಾದ ಬಾಳೆ ಎಲೆ ವ್ಯಾಪಾರ ಈಗ‘ಆರ್.ವಿ. ಭದ್ರಯ್ಯ ಪೂಜಾಲೋಕ’ ಎಂಬ ಬ್ರ್ಯಾಂಡ್‌ ಅಡಿಯಲ್ಲಿ ಸಮಸ್ತ ಪೂಜಾ ಸಾಮಗ್ರಿಗಳನ್ನು ಒದಗಿಸುವ ಕಂಪನಿಯಾಗಿ ಹೊರ ಹೊಮ್ಮಿದೆ. ತನ್ನ ಉತ್ಪನ್ನಗಳಿಗೆ ‘ಮೇಕ್ ಇನ್ ಕರ್ನಾಟಕ’ ಲಾಂಛನ ಅಳವಡಿಸುವ ಮೂಲಕ ಕನ್ನಡ ಪ್ರೀತಿ ಮೆರೆದಿದೆ. ಅಲ್ಲದೇ 500ಕ್ಕೂ ಹೆಚ್ಚು ನಿರುದ್ಯೋಗಿ ಕನ್ನಡಿಗರಿಗೆ ಪ್ರಾಂಚೈಸಿ ನೀಡಲು ಮುಂದಾಗಿದೆ.

ರಾಜಾಜಿನಗರದ ಬಾಷ್ಯಂ ವೃತ್ತದಆಸುಪಾಸಿನ ರಸ್ತೆ ಬದಿಯಲ್ಲಿ1980ರ ದಶಕದಲ್ಲಿ ಬಾಳೆಎಲೆ ವ್ಯಾಪಾರ ಮಾಡುತ್ತಿದ್ದ ಆರ್.ವಿ. ಭದ್ರಯ್ಯ,ಬಾಯಾರಿ ಬಂದ ಜನರಿಗೆ ರಸ್ತೆ ಬದಿಯಲ್ಲಿ ತಮ್ಮ ಪಕ್ಕದಲ್ಲೇ ಕುಡಿಯುವ ನೀರಿನ ಮಡಕೆಯೊಂದನ್ನು ಇರಿಸಿಕೊಂಡಿದ್ದರು. ಇದೇ ಭದ್ರಯ್ಯ ಮುಂದೆ ದೊಡ್ಡ ವ್ಯಾಪಾರಿಯಾಗುತ್ತಾರೆ ಎಂದು ಆಗ ಯಾರೂ ನಿರೀಕ್ಷೆ ಮಾಡಿರಲಿಲ್ಲ.

ವ್ಯಾಪಾರ ಕೈಹಿಡಿದಂತೆ ಲಾಭಾಂಶದ ಸ್ವಲ್ಪ ಭಾಗವನ್ನು ಜನೋಪಯೋಗಿ ಕೆಲಸಕ್ಕೆ ಮೀಸಲಿಟ್ಟರು. ಬಸ್‌ ಪ್ರಯಾಣಿಕರಿಗಾಗಿ 40 ಕಡೆ ತಂಗುದಾಣ ಕಟ್ಟಿಸಿದರು. 145 ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಮಡಕೆಗಳನ್ನು ಇರಿಸಿ ನಿತ್ಯವೂ ಅವರೇ ಆ ಮಡಿಕೆಗಳಿಗೆ ನೀರು ತುಂಬಿಸುತ್ತಿದ್ದರು. ಜನ ಕುಳಿತುಕೊಳ್ಳಲು ಅಲ್ಲಲ್ಲಿ ಬೆಂಚ್ ಕಲ್ಲುಗಳನ್ನು ಹಾಕಿಸಿದ್ದರು. ಜನರಿಗೆ ಕುಡಿಯುವ ನೀರು ಪೂರೈಸಿದ ಭದ್ರಯ್ಯ ಮುಂದೆ ‘ನೀರ್ ಭದ್ರಯ್ಯ’ ಎಂದೇ ಹೆಸರು ಗಳಿಸಿದರು. ಬಾಳೆ ಎಲೆಗಳ ಜೊತೆಗೆ ಪೂಜಾ ಸಾಮಗ್ರಿಗಳ ಮಾರಾಟವನ್ನೂ ಆರಂಭಿಸಿದರು.

ADVERTISEMENT

ಜನೋಪಯೋಗಿ ಕೆಲಸ ಹೆಚ್ಚಾದಷ್ಟೂ ವ್ಯಾಪಾರವೂ ಕೈಹಿಡಿಯುತ್ತಾ ಹೋಯಿತು. ಭದ್ರಯ್ಯ ನಿಧನರಾದ ಬಳಿಕ ಅವರ ಮಗ ಆರ್.ಬಿ. ಶಿವಕುಮಾರ್ ಪೂಜಾ ಸಾಮಗ್ರಿಗಳ ವ್ಯಾಪಾರ ಮುಂದುವರಿಸಿದ್ದಾರೆ. ನಗರದ 11 ಕಡೆಗಳಲ್ಲಿ ಪೂಜಾಲೋಕದ ಶಾಖೆಗಳನ್ನು ತೆರೆದಿದ್ದಾರೆ.500ಕ್ಕೂ ಹೆಚ್ಚು ಉತ್ಪನ್ನಗಳು ಒಂದೇ ಮಳಿಗೆಯಲ್ಲಿ ಸಿಗುವಂತೆ ಮಾಡಿದ್ದಾರೆ. ನಗರದಲ್ಲಿ 60 ಮಳಿಗೆ ಸೇರಿ ರಾಜ್ಯ, ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲೂ ಸೇರಿ 500 ಮಳಿಗೆ ಪ್ರಾಂಚೈಸಿ ಮೂಲಕ ತೆರೆಯಲು ಉದ್ದೇಶಿಸಿದ್ದಾರೆ.

‘ಎಲ್ಲ ಕಡೆಯೂ ನಿರುದ್ಯೋಗಿ ಕನ್ನಡಿಗರನ್ನೇ ಹುಡುಕಿ, ಅವರಿಗೆ ಬೇಕಿರುವ ಸಾಲ ಸೌಲಭ್ಯಗಳನ್ನು ಬ್ಯಾಂಕ್‌ಗಳಿಂದ ಕೊಡಿಸಿ ಪ್ರಾಂಚೈಸಿ ನೀಡಲಾಗುವುದು. ₹60 ಸಾಲ ಪಡೆದು ನಮ್ಮ ತಂದೆ ಈ ವ್ಯಾಪಾರ ಆರಂಭಿಸಿದರು. ಬಳಿಕ ವಾಟಾಳ್ ನಾಗರಾಜ್ ಅವರ ಸಹಕಾರದಿಂದ ₹5 ಸಾವಿರ ಸಾಲ ಬ್ಯಾಂಕ್‌ನಿಂದ ದೊರೆತಿತ್ತು. ಆದ್ದರಿಂದ ಕನ್ನಡಿಗರ ಋಣ ತೀರಿಸಲು ಕನ್ನಡಿಗ ನಿರುದ್ಯೋಗಿಗಳಿಗಷ್ಟೇ ಪ್ರಾಂಚೈಸಿ ನೀಡಲಾಗುತ್ತಿದೆ’ ಎಂದು ಶಿವಕುಮಾರ್ ಹೇಳುತ್ತಾರೆ.

ನ.1ರಂದು ಉತ್ಪನ್ನಗಳ ಬಿಡುಗಡೆ
‘ಅರಿಶಿನ–ಕುಂಕುಮದ ಆದಿಯಾಗಿ ನಮ್ಮ ಮಳಿಗೆಯಲ್ಲಿ ಸಿಗುವ 500ಕ್ಕೂ ಹೆಚ್ಚು ಉತ್ಪನ್ನಗಳು ಸ್ಥಳೀಯವಾಗಿಯೇ ಮನೆಗಳಲ್ಲೇ ತಯಾರಿಸಲಾಗುತ್ತದೆ. ಆದ್ದರಿಂದ ಅವುಗಳಿಗೆ ‘ಮೇಕ್ ಇನ್ ಕರ್ನಾಟಕ’ ಎಂಬ ಲಾಂಛನ ಅಳವಡಿಸಲಾಗುತ್ತಿದೆ’ ಎಂದು ಭದ್ರಯ್ಯ ಪೂಜಾಲೋಕದ ಸಿಇಒ ಆರ್.ಬಿ. ಶಿವಕುಮಾರ್ ಹೇಳಿದರು.

‘ಕನ್ನಡದ ಬಾವುಟದ ಒಳಗೆ ಆನೆ ಚಿತ್ರ ಇರುವ ಲಾಂಛನ ಅಳವಡಿಸಿರುವ ಉತ್ಪನ್ನಗಳನ್ನು ನ.1ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಕರ್ನಾಟಕದ ಬ್ರ್ಯಾಂಡ್‌ನ ಉತ್ಪನ್ನಗಳು ದೇಶ–ವಿದೇಶಗಳಲ್ಲೂ ಪಸರಿಸಬೇಕು. ಶಾಪಿಂಗ್ ಮಾಲ್‌ಗಳಲ್ಲಿ ಮಾರಾಟಕ್ಕೆ ಒಡಂಬಡಿಕೆ ಮಾಡಿಕೊಳ್ಳಲು ಹಲವು ಬಹುರಾಷ್ಟ್ರೀಯ ಕಂಪನಿಗಳು ಒತ್ತಡ ಹೇರಿದವು. ಲಾಭದ ಪಾಲು ಕನ್ನಡಿಗರಿಗೇ ಸಲ್ಲಬೇಕು ಎಂಬ ಉದ್ದೇಶದಿಂದ ಒಪ್ಪಿಗೆ ಸೂಚಿಸಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.