ADVERTISEMENT

ಅಪಾಯಕಾರಿ ಮರ ತೆರವಿಗೆ ಆನ್‌ಲೈನ್‌ ಅಹವಾಲು

ನಗರದ ಹಸಿರೀಕರಣಕ್ಕೆ ಕಾರ್ಯಕ್ರಮ ರೂಪಿಸಿ: ಆಡಳಿತಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 21:39 IST
Last Updated 13 ಅಕ್ಟೋಬರ್ 2020, 21:39 IST
ಸಭೆಯಲ್ಲಿ ಗೌರವ ಗುಪ್ತ ಮಾತನಾಡಿದರು
ಸಭೆಯಲ್ಲಿ ಗೌರವ ಗುಪ್ತ ಮಾತನಾಡಿದರು   
""

ಬೆಂಗಳೂರು: ಬಿಬಿಎಂಪಿಯ ಅರಣ್ಯ ವಿಭಾಗವು ನಗರದಾದ್ಯಂತ ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ನಗರವನ್ನು ಹಚ್ಚಹಸಿರಾಗಿಡಲು ಕಾರ್ಯಕ್ರಮ ರೂಪಿಸಬೇಕು. ಅಪಾಯಕಾರಿ ಮರಗಳನ್ನು ಹಾಗೂ ಒಣಗಿದ ಕೊಂಬೆಗಳನ್ನು ತೆರವುಗೊಳಿಸುವ ಅರ್ಜಿಗಳನ್ನು ಆನ್‌ಲೈನ್‌ನಲ್ಲೇ ಸ್ವೀಕರಿಸಿ ವಿಲೇ ಮಾಡುವ ವ್ಯವಸ್ಥೆ ರೂಪಿಸಬೇಕು ಎಂದು ಆಡಳಿತಾಧಿಕಾರಿ ಗೌರವ ಗುಪ್ತ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಹಸಿರು ಸಂರಕ್ಷಣೆ ಕುರಿತು ಅವರು ಮಂಗಳವಾರ ಅರಣ್ಯ ಹಾಗೂ ತೋಟಗಾರಿಕಾ ವಿಭಾಗದ ಅಧಿಕಾರಿಗಳ ಸಭೆ ನಡೆಸಿದರು. ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ತ್ವರಿತವಾಗಿ ಹಮ್ಮಿಕೊಳ್ಳಬೇಕು, ಇಲ್ಲದಿದ್ದರೆ ಮಳೆ ಬಂದಾಗ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ರಂಗನಾಥ ಸ್ವಾಮಿ,‘ಮರ, ರೆಂಬೆ, ಕೊಂಬೆ ತೆರವು ಮಾಡುವ ಬಗ್ಗೆ ‘ಸಹಾಯ 2’ ಆ್ಯಪ್‌ ಮೂಲಕ ಪಾಲಿಕೆಯ ಗಮನಕ್ಕೆ ತರಬಹುದು. ವಲಯ ಕಚೇರಿ ಹಾಗೂ ಪಾಲಿಕೆ ಕೇಂದ್ರ ಕಚೇರಿಯಲ್ಲೂ ಈ ಬಗ್ಗೆ ದೂರು ನೀಡಬಹುದು. ‘ವೃಕ್ಷ ಸಮಿತಿ’ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಅಗತ್ಯವಿದ್ದರೆ ಮರ ಅಥವಾ ರೆಂಬೆ– ಕೊಂಬೆಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಉದ್ಯಾನಗಳು, ರಸ್ತೆ ವಿಭಜಕಗಳು ಹಾಗೂ ವೃತ್ತಗಳನ್ನು ಆಕರ್ಷಣೀಯವಾಗಿ ಕಾಣಿಸುವಂತೆ ನಿರ್ವಹಣೆ ಮಾಡಬೇಕು ಎಂದು ಗೌರವ್‌ ಗುಪ್ತ ತೋಟಗಾರಿಕಾ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಕೆಲ ಉದ್ಯಾನಗಳು ತುಂಬಾ ಚೆಂದವಾಗಿವೆ. ಇನ್ನು ಕೆಲವು ಕಳಪೆ ಸ್ಥಿತಿಯಲ್ಲಿವೆ. ಪ್ರಮುಖ ಉದ್ಯಾನಗಳಾದ ಜೆ.ಪಿ.ಪಾರ್ಕ್, ಸ್ವಾತಂತ್ರ್ಯ ಉದ್ಯಾನ, ಕೃಷ್ಣರಾವ್ ಉದ್ಯಾನ, ಜಯಮಹಲ್ ಉದ್ಯಾನ, ಬುಲೇವಾರ್ಡ್‌ಗಳ ನಿರ್ವಹಣೆ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು ಎಂದು ಸೂಚಿಸಿದರು.

ರಸ್ತೆ ವಿಭಜಕಗಳನ್ನು ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿ ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಲು ಕಾರ್ಪೊರೇಟ್‌ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಕೆಲವು ಕಂಪನಿಗಳು ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಅಂತಹ ರಸ್ತೆಗಳನ್ನುಬಿಬಿಎಂಪಿಯಿಂದಲೇ ನಿರ್ವಹಣೆ ಮಾಡಬೇಕು ಎಂದು ಆದೇಶ ಮಾಡಿದರು.

ತೋಟಗಾರಿಕೆ ವಿಭಾಗದ ಉಪ ನಿರ್ದೇಶಕ ಗಂಗಾಧರ ಸ್ವಾಮಿ, ‘ತೋಟಗಾರಿಕಾ ವಿಭಾಗದಿಂದ ಉದ್ಯಾನಗಳಲ್ಲಿ ಸುರಕ್ಷತಾ, ವಾಯುವಿಹಾರ ಪಥ, ಆಸನಗಳ ವ್ಯವಸ್ಥೆ, ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿದೆ’ ಎಂದು ತಿಳಿಸಿದರು.

‘1.30 ಲಕ್ಷ ಸಸಿ ನಾಟಿ‘

‘ಪಾಲಿಕೆ ವತಿಯಿಂದ ಕೆಂಪಾಪುರ, ಕೂಡ್ಲು, ಅಟ್ಟೂರು, ಜ್ಞಾನಭಾರತಿ ಆವರಣಗಳಲ್ಲಿ ಒಟ್ಟು ನಾಲ್ಕು ನರ್ಸರಿಗಳನ್ನು ನಿರ್ವಹಿಸಲಾಗುತ್ತಿದೆ. ಇವುಗಳಲ್ಲಿ ಒಟ್ಟು 5 ಲಕ್ಷ ಸಸಿಗಳು ಲಭ್ಯ. ಪ್ರಸಕ್ತ ಸಾಲಿನಲ್ಲಿ ಪಾಲಿಕೆ ವತಿಯಿಂದ 1.30 ಲಕ್ಷ ಸಸಿ ನಡುವೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ರಸ್ತೆ ಬದಿ, ಆಟದ ಮೈದಾನ, ಶಾಲಾ-ಕಾಲೇಜು ಮುಂಭಾಗ ಹಾಗೂ ಇನ್ನಿತರೆ ಖಾಲಿ ಸ್ಥಳಗಳಲ್ಲಿ ಸಸಿಗಳನ್ನು ನಡೆಲಾಗುತ್ತಿದೆ. ಈ ಕಾರ್ಯದಲ್ಲಿ ಜನರು ಹಾಗೂ ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಜನರಿಗೆ ಉಚಿತವಾಗಿ ಸಸಿಗಳನ್ನು ವಿತರಣೆ ಮಾಡಲಾಗುತ್ತದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದರು.

ಅಂಕಿ ಅಂಶ

1,352:ಪಾಲಿಕೆ ವ್ಯಾಪ್ತಿಯಲ್ಲಿರುವ ಒಟ್ಟು ಉದ್ಯಾನಗಳು

1,118:ಉದ್ಯಾನಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ

234:ಉದ್ಯಾನಗಳನ್ನು ಇನ್ನಷ್ಟೇ ಅಭಿವೃದ್ಧಿಪಡಿಸಬೇಕಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.