ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಆದ್ಯತೆ ಮೇರೆಗೆ ಮಕ್ಕಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚನೆ ನೀಡಿದೆ.
ಅಕ್ಟೋಬರ್ 28ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿದ್ದ ‘ನಾಪತ್ತೆ ಪ್ರಕರಣ: ಬಾಲಕಿಯರೇ ಅಧಿಕ’ ಎಂಬ ಶೀರ್ಷಿಕೆಯ ವರದಿ ಆಧರಿಸಿ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಇಲಾಖೆಯು ಕೈಗೊಂಡ ಮತ್ತು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿಯನ್ನು ಏಳು ದಿನದೊಳಗೆ ಸಲ್ಲಿಸುವಂತೆ ಕೋರಿದ್ದಾರೆ.
ಅಂಕಿಅಂಶ ಗಮನಿಸಿದಾಗ, ರಾಜ್ಯದಲ್ಲಿ ಬಾಲಕಿಯರ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿವೆ. ಕಳ್ಳ ಸಾಗಾಣಿಕೆ, ಬಾಲ ಕಾರ್ಮಿಕರು, ಅಂಗಾಂಗ ಮಾರಾಟ ದಂಧೆ ಮತ್ತು ಭಿಕ್ಷಾಟನೆಗೆ ಮಕ್ಕಳನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಪ‍್ರಕರಣ ದಾಖಲಾದ 120 ದಿನಗಳ ನಂತರವೂ ಮಕ್ಕಳು ಪತ್ತೆಯಾಗದಿದ್ದರೆ, ಅಂತಹ ಪ್ರಕರಣಗಳನ್ನು ಮಾನವ ಕಳ್ಳಸಾಗಣೆ ತಡೆ ಘಟಕಗಳಿಗೆ (ಎಎಚ್‌ಟಿಯು) ವರ್ಗಾಯಿಸಬೇಕು. ಇತರೆ ಇಲಾಖೆಗಳ ಜತೆ ಪೊಲೀಸ್ ಇಲಾಖೆಯು ಸಮನ್ವಯ ಸಾಧಿಸಿ, ಶಾಲಾ, ಕಾಲೇಜುಗಳಲ್ಲಿ ಮಕ್ಕಳು ಕಾಣೆಯಾಗದಂತೆ ಹಾಗೂ ಆಮಿಷಗಳಿಗೆ ಒಳಗಾಗದಂತೆ ಅರಿವು ಮೂಡಿಸಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.