
ಬೆಂಗಳೂರು: ‘ರಾಜ್ಯದಲ್ಲಿ ಪ್ರಕಾಶಕರಿಗೆ ಸರ್ಕಾರದ ಪ್ರೋತ್ಸಾಹ ಸಿಗುತ್ತಿಲ್ಲ, ಗ್ರಂಥಾಲಯ ಇಲಾಖೆಯೂ ಕಣ್ಮುಚ್ಚಿ ಕುಳಿತಿದೆ. ಇದರಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಸಾಹಿತಿ ಮಲ್ಲೇಪುರಂ ಜಿ.ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.
ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ಆಯೋಜಿಸಿದ್ದ ಮೂರು ದಿನಗಳ ವೀರಲೋಕ ಪುಸ್ತಕ ಸಂತೆಯ ಸಮಾರೋಪ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು.
‘ಯಾವುದೇ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣಬೇಕೆಂದರೆ ಆತನಿಗೆ ಪುಸ್ತಕಗಳು ಸಂಗಾತಿಯಾಗಿರಬೇಕು. ಪುಸ್ತಕಗಳ ಪ್ರಕಟಣೆಗೆ ಈಗ ಹೆಚ್ಚು ಅವಕಾಶವಂತೂ ಇದೆ. ಆದರೆ, ಪುಸ್ತಕೋದ್ಯಮಕ್ಕೆ ಬೆಂಬಲವಾಗಿ ನಿಲ್ಲಬೇಕಾದ ಗ್ರಂಥಾಲಯ ಇಲಾಖೆ ಕೈ ಕಟ್ಟಿ ಕುಳಿತುಕೊಂಡಿರುವುದು ದೌರ್ಭಾಗ್ಯ’ ಎಂದರು.
‘ಈಗ ಓದಲು ಡಿಜಿಟಲ್ ವೇದಿಕೆ ಕೂಡ ಅವಕಾಶ ನೀಡಿದೆ. ಐ ಪಾಡ್‌ಗಳನ್ನು ಹಿಡಿದು ಓದಬಹುದಾದರೂ ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಓದುವುದರ ಖುಷಿಯೇ ಬೇರೆ. ಅಂತಹ ಓದುವ ಖುಷಿ ಹೆಚ್ಚಿಸುವ ಪ್ರಯತ್ನಗಳು ಸಂತೆಗಳಿಂದ ಆಗುತ್ತಿದೆ. ಪ್ರಕಾಶಕರಿಗೆ ವೇದಿಕೆ ಕಲ್ಪಿಸುವ ವೀರಲೋಕ ಸಂಸ್ಥೆಯ ಪ್ರಯತ್ನ ಶ್ಲಾಘನೀಯ’ ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಸಂತೆಗಳು ಬಗೆಬಗೆಯ ರೂಪದಲ್ಲಿ ಜನರ ಮುಂದೆ ಬರುತ್ತಿವೆ. ಇದರಲ್ಲಿ ಪುಸ್ತಕ ಸಂತೆಯ ಮೂಲಕ ಜನರಲ್ಲಿ ಓದುವ ಸಂಸ್ಕೃತಿ ಬೆಳೆಸುವ ಈ ಪ್ರಯತ್ನ ಸ್ತುತ್ಯರ್ಹವಾದದ್ದು. ಕನ್ನಡದ ಕವಿರಾಜ ಮಾರ್ಗ 8ನೇ ಶತಮಾನದಲ್ಲಿಯೇ ಪ್ರಕಟಗೊಂಡ ಕೃತಿ. ಅದಕ್ಕಿಂತ ಮೊದಲು ಕನ್ನಡ ಇತ್ತು ಎನ್ನುವ ಇತಿಹಾಸ ನೋಡಿದ್ದೇವೆ. ಪುಸ್ತಕಗಳನ್ನು ಜನರಿಗೆ ತಲುಪಿಸುವ ಇಂತಹ ಪ್ರಯತ್ನಗಳು ಹೆಚ್ಚಬೇಕು’ ಎಂದು ಸಲಹೆ ನೀಡಿದರು.
ಶಾಸಕ ಸಿ.ಕೆ.ರಾಮಮೂರ್ತಿ, ವೀರಕಪುತ್ರ ಶ್ರೀನಿವಾಸ್ ಉಪಸ್ಥಿತರಿದ್ದರು. ಲೇಖಕರಾದ ನಾಗರಾಜ ವಸ್ತಾರೆ ಅವರ ’ಹನ್ನೊಂದು ಮತ್ತೊಂದು‘, ಬಿ.ಯು. ಗೀತಾ ಅವರ ’ಹಾಲಲ್ಲಿ ಕೆನೆಯಾಗಿ‘, ರವಿಕೃಷ್ಣಾರೆಡ್ಡಿ ಅವರ ’ಅಮೆರಿಕದಿಂದ ರವಿ‘, ರಾಜು ಅಡಕಳ್ಳಿ ಅವರ ’ರಸಗುಲ್ಲಾ‘ ಕೃತಿಗಳನ್ನು ಜನಾರ್ಪಣೆಗೊಳಿಸಲಾಯಿತು.
ವಿವಿಧ ಪ್ರಕಾಶನಗಳಿಗೆ ಮುದ್ರಣ, ಒಳಪುಟ ವಿನ್ಯಾಸದ ಗೌರವಧನ ನೀಡಲಾಯಿತು. ನಂತರ ರೇವಾ ರಂಗ ಅಧ್ಯಯನ ಕೇಂದ್ರದವರು ನಂದಕುಮಾರ್ ಅನ್ನಕ್ಕನವರ್ ಅವರ ನಿರ್ದೇಶನದಲ್ಲಿ ದರ್ಶನಂ ನಾಟಕ ಪ್ರದರ್ಶನ ಮಾಡಿದರು.
ಬೀದರ್‌ನಲ್ಲಿ ಮುಂದಿನ ಪುಸ್ತಕ ಸಂತೆ: ಮುಂದಿನ ಪುಸ್ತಕ ಸಂತೆಯನ್ನು 2026ರ ಜನವರಿ 24, 25, 26ರಂದು ಬೀದರ್‌ನಲ್ಲಿ ಆಯೋಜಿಸಲಾಗುವುದು ಎಂದು ಪ್ರಕಾಶಕರ ಸಭೆಯಲ್ಲಿ ಬೀದರ್‌ನ ಭಾಲ್ಕಿ ಕನ್ನಡ ಮಠದ ಗುರು ಬಸವ ಪಟ್ಟದೇವರು ತಿಳಿಸಿದರು.
₹4 ಕೋಟಿ ವಹಿವಾಟು
‘ವೀರಲೋಕ ಪುಸ್ತಕ ಸಂತೆಗೆ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಪ್ರಕಾಶಕರು 2 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಇರಿಸಿದ್ದರು. ಇದಲ್ಲದೇ ಇತರೆ ಮಳಿಗೆಗಳೂ ಇದ್ದವು. ಹೆಚ್ಚಿನ ಪುಸ್ತಕ ಮಳಿಗೆಯವರು ₹5 ಲಕ್ಷದಿಂದ ₹11 ಲಕ್ಷದವರೆಗೂ ವಹಿವಾಟು ನಡೆಸಿದ್ದಾರೆ. ಒಟ್ಟಾರೆ ₹4 ಕೋಟಿವರೆಗೂ ವಹಿವಾಟು ಆಗಿರುವ ಅಂದಾಜಿದೆ’ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದರು.
ಪ್ರಮುಖರ ಸಂವಾದ
ಮೂರನೇ ದಿನವೂ ಪ್ರಮುಖ ಲೇಖಕರೊಂದಿಗೆ ಸಂವಾದವಿತ್ತು. ಅಬ್ದುಲ್ ರಶೀದ್ ಪಿ.ಚಂದ್ರಿಕಾ ಶತಾವಧಾನಿ ಗಣೇಶ್ ಶರಣು ಹುಲ್ಲೂರು ಸಂವಾದದಲ್ಲಿ ಭಾಗಿಯಾದರು. ಓದುಗರು ಲೇಖಕರ ವಿಭಾಗದಲ್ಲೂ ಲೇಖಕರು ಪಾಲ್ಗೊಂಡರು. ಕೊನೆ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಪ್ರೇಮಿಗಳು ಮೇಳಕ್ಕೆ ಆಗಮಿಸಿ ಪುಸ್ತಕ ಖರೀದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.