ಅಪಘಾತ –ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಪಾನಮತ್ತ ಚಾಲಕನೊಬ್ಬ ಅಡ್ಡಾದಿಡ್ಡಿ ಕಾರು ಚಲಾಯಿಸಿ ಸರಣಿ ಅಪಘಾತವನ್ನುಂಟು ಮಾಡಿದ್ದು, ಇದರಿಂದಾಗಿ ಬೈಕ್ ಸವಾರ ವಿನಯ್ (32) ಎಂಬುವವರು ಮೃತಪಟ್ಟಿದ್ದಾರೆ.
ಸುಬ್ರಮಣ್ಯನಗರದ ಮುಖ್ಯರಸ್ತೆಯಲ್ಲಿ ಭಾನುವಾರ ಸರಣಿ ಅಪಘಾತ ಸಂಭವಿಸಿದ್ದು, ಈ ಸಂಬಂಧ ಮಲ್ಲೇಶ್ವರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸುಬ್ರಮಣ್ಯನಗರದ ವಿನಯ್ ಅವರು ಸ್ನೇಹಿತನ ಜೊತೆ ಬೈಕ್‌ನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತಕ್ಕೆ ಕಾರಣ ಎನ್ನಲಾದ ಕಾರು ಚಾಲಕ ಹರಿನಾಥ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಮಲ್ಲೇಶ್ವರ ಸಂಚಾರ ಠಾಣೆ ಪೊಲೀಸರು ಹೇಳಿದರು.
‘ಪಾನಮತ್ತನಾಗಿದ್ದ ಹರಿನಾಥ್, ಕಾರು ಚಲಾಯಿಸಿಕೊಂಡು ಹೊರಟಿದ್ದ. ಸುಬ್ರಮಣ್ಯನಗರದ ಮುಖ್ಯರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ, ಆಟೊಗೆ ಗುದ್ದಿಸಿದ್ದ. ನಂತರ, ವಿನಯ್ ಅವರ ಬೈಕ್‌ಗೂ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದಿಂದಾಗಿ ವಿನಯ್ ಹಾಗೂ ಸ್ನೇಹಿತನಿಗೆ ತೀವ್ರ ಗಾಯವಾಗಿತ್ತು. ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ತಿಳಿಸಿದರು.
‘ವಿನಯ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸ್ನೇಹಿತನ ಆರೋಗ್ಯ ಸ್ಥಿತಿಯೂ ಚಿಂತಾಜನಕವಾಗಿದೆ’ ಎಂದು ಪೊಲೀಸರು ಹೇಳಿದರು.
ಕಾರಿನಿಂದ ಇಳಿಯದ ಆರೋಪಿ: ‘ಅಪಘಾತದ ನಂತರವೂ ಆರೋಪಿ ಕಾರಿನಿಂದ ಇಳಿದಿರಲಿಲ್ಲ. ಸ್ಥಳದಲ್ಲಿ ಸೇರಿದ್ದ ಜನ, ಆತನನ್ನು ಕಾರಿನಿಂದ ಇಳಿಸಲು ಯತ್ನಿಸಿ ವಿಫಲರಾಗಿದ್ದರು. ಸ್ಥಳಕ್ಕೆ ಹೋಗಿದ್ದ ಗಸ್ತು ವಾಹನದ ಸಿಬ್ಬಂದಿ, ಆರೋಪಿಯನ್ನು ಕಾರಿನಿಂದ ಇಳಿಸಿ ವಶಕ್ಕೆ ಪಡೆದು ಠಾಣೆಗೆ ಒಪ್ಪಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ಆರೋಪಿ ಮದ್ಯ ಕುಡಿದು ಕಾರು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬರಬೇಕಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.