ADVERTISEMENT

ಹೋಟೆಲ್ ಬಾಡಿಗೆ ವಿಷಯಕ್ಕೆ ಗಲಾಟೆ; ಸಹಾಯದ ಸೋಗಿನಲ್ಲಿ ಆಸ್ಟ್ರೇಲಿಯಾ ಪ್ರಜೆ ಸುಲಿಗೆ

ಬ್ಯಾಗ್‌ ಕಿತ್ತೊಯ್ದಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 16:16 IST
Last Updated 25 ಜೂನ್ 2022, 16:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಹೋಟೆಲ್‌ ಬಾಡಿಗೆ ವಿಚಾರವಾಗಿ ನಡೆದ ಗಲಾಟೆ ವೇಳೆ ಮಧ್ಯಪ್ರವೇಶಿಸಿ ಸಹಾಯದ ಸೋಗಿನಲ್ಲಿ ಆಸ್ಟ್ರೇಲಿಯಾ ಪ್ರಜೆಯನ್ನು ಅಪಹರಿಸಿ ಸುಲಿಗೆ ಮಾಡಿದ್ದ ಆರೋಪದಡಿ ಸೈಯದ್ ಇಮ್ರಾನ್ ಎಂಬಾತನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.

‘ಜೂನ್ 23ರಂದು ನಡೆದಿರುವ ಘಟನೆ ಸಂಬಂಧ ಆಸ್ಟ್ರೇಲಿಯಾ ಪ್ರಜೆ ಅಸೊ ಹಮ್ಜೇಯಿ ಅವರಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಇಮ್ರಾನ್‌ನನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ ‘ಪ್ರಜಾವಾಣಿ’ಗೆ ತಿಳಿಸಿದರು.

₹ 13,500 ಬಾಡಿಗೆಗಾಗಿ ಗಲಾಟೆ: ‘ನವೋದ್ಯಮವೊಂದರ ಸಂಸ್ಥಾಪಕ ಅಸೊ ಹಮ್ಜೇಯಿ, ತಮ್ಮ ಕಂಪನಿ ಕಾರ್ಯವ್ಯಾಪ್ತಿ ವಿಸ್ತರಿಸುವುದಕ್ಕಾಗಿ ಇತ್ತೀಚೆಗೆ ನಗರಕ್ಕೆ ಬಂದಿದ್ದರು. ಮಾನ್ಯತಾ ಟೆಕ್‌ ಪಾರ್ಕ್‌ ಹಾಗೂ ಶಿವಾಜಿನಗರದಲ್ಲಿ ಕಚೇರಿ ತೆರೆದಿದ್ದರು. ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆ ವ್ಯಾಪ್ತಿಯ ‘ಫಾರ್ಚ್ಯೂನ್ ಇನ್’ ಹೋಟೆಲ್‌ ಕೊಠಡಿಯಲ್ಲಿ ಉಳಿದುಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘15 ದಿನ ಹೋಟೆಲ್‌ನಲ್ಲಿದ್ದ ಹಮ್ಜೇಯಿ, ಬಾಡಿಗೆ ಪಾವತಿಸಿರಲಿಲ್ಲ. ಇದನ್ನು ಪ್ರಶ್ನಿಸಿದ್ದ ವ್ಯವಸ್ಥಾಪಕ, ‘₹13,500 ಬಾಡಿಗೆ ಪಾವತಿ ಮಾಡಿ’ ಎಂದು ಕೋರಿದ್ದರು. ತಮ್ಮ ಬಳಿ ನಗದು ಇಲ್ಲವೆಂದು ಹೇಳಿದ್ದ ಹಮ್ಜೇಯಿ, ಆನ್‌ಲೈನ್ ಮೂಲಕ ಪಾವತಿ ಮಾಡುವುದಾಗಿ ತಿಳಿಸಿದ್ದರು. ಅದಕ್ಕೆ ವ್ಯವಸ್ಥಾಪಕ ಒಪ್ಪಿರಲಿಲ್ಲ.’

‘ಬಾಡಿಗೆ ವಿಚಾರವಾಗಿ ಗಲಾಟೆ ಆರಂಭವಾಗಿ, ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಹೋಟೆಲ್ ಖಾಲಿ ಮಾಡುವುದಾಗಿ ಹೇಳಿದ್ದ ಹಮ್ಜೇಯಿ, ಬ್ಯಾಗ್‌ ತರಲೆಂದು ಕೊಠಡಿಗೆ ಹೋಗಿದ್ದರು. ಹಿಂಬಾಲಿಸಿದ್ದ ವ್ಯವಸ್ಥಾಪಕ ಹಾಗೂ ಸಿಬ್ಬಂದಿ, ಅವರ ಮೇಲೆ ಹಲ್ಲೆ ಮಾಡಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಕಲೆಹಾಕಲು ಹೋಟೆಲ್ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಬಳಿ ಕರೆದೊಯ್ಯುವುದಾಗಿ ಅಪಹರಣ: ‘ಹೋಟೆಲ್‌ನ ಇನ್ನೊಂದು ಕೊಠಡಿಯಲ್ಲಿದ್ದ ಆರೋಪಿ ಸೈಯದ್ ಇಮ್ರಾನ್ ಹಾಗೂ ಸಹಚರರು, ಗಲಾಟೆ ವೇಳೆ ಮಧ್ಯಪ್ರವೇಶಿಸಿ ವಿದೇಶಿ ಪ್ರಜೆ ಪರ ಮಾತನಾಡಿದ್ದರು. ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಹೇಳಿ, ದ್ವಿಚಕ್ರ ವಾಹನದಲ್ಲಿ ಪ್ರಜೆಯನ್ನು ಹತ್ತಿಸಿಕೊಂಡು ಕೆ.ಜಿ.ಹಳ್ಳಿ ಬಳಿಯ ನಿರ್ಜನ ಪ್ರದೇಶಕ್ಕೆ ತೆರಳಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಚಾಕು ತೋರಿಸಿ ಪ್ರಜೆಯನ್ನು ಬೆದರಿಸಿದ್ದ ಆರೋಪಿಗಳು, ಬ್ಯಾಗ್ ಹಾಗೂ ಇತರೆ ವಸ್ತುಗಳನ್ನು ಸುಲಿಗೆ ಮಾಡಿದ್ದರು. ತಮ್ಮ ಆತ್ಮರಕ್ಷಣೆಗೆ ಮುಂದಾಗಿದ್ದ ಪ್ರಜೆ, ಸ್ಥಳದಲ್ಲಿದ್ದ ಕಲ್ಲು ಎತ್ತಿಕೊಂಡು ಎಸೆಯುವುದಾಗಿ ಕೂಗಾಡಿದ್ದರು. ಇದಕ್ಕೆ ಹೆದರಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.