ADVERTISEMENT

ಪತ್ನಿಯ ಅಜ್ಜಿ, ಸಂಬಂಧಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 19:30 IST
Last Updated 14 ಜೂನ್ 2021, 19:30 IST
ಫ್ರಾಂಕ್
ಫ್ರಾಂಕ್   

ಬೆಂಗಳೂರು: ಚಿನ್ನಾಭರಣ ಸುಲಿಗೆಗಾಗಿ ಪತ್ನಿಯ ಅಜ್ಜಿ ಲೂರ್ಡ್‌ಮೇರಿ ಹಾಗೂ ಸುಲಿಗೆಯಲ್ಲಿ ಪಾಲು ಕೇಳಿದ್ದಕ್ಕಾಗಿ ತನ್ನ ಸಂಬಂಧಿ ಶ್ರೀನಿವಾಸ್ ಎಂಬುವರನ್ನು ಕೊಲೆ ಮಾಡಿದ್ದ ಆರೋಪಿ ಫ್ರಾಂಕ್ ಅಂಥೋಣಿ (30) ಎಂಬಾತನಿಗೆ ನಗರದ ಸಿಸಿಎಚ್ 64ನೇ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ರಾಜಗೋಪಾಲನಗರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯಲ್ಲಿ 2009ರಲ್ಲಿ ಪ್ರತ್ಯೇಕವಾಗಿ ನಡೆದಿದ್ದ ಕೊಲೆ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ. ವೆಂಕಟೇಶ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಕನಕಪುರ ಮುಖ್ಯರಸ್ತೆಯ ತಟ್ಟಗುಪ್ಪೆ ಗ್ರಾಮದ ನಿವಾಸಿ ಫ್ರಾಂಕ್‌ನನ್ನು ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಶರಣಗೌಡ ವಿ. ಪಾಟೀಲ ವಾದಿಸಿದ್ದರು.

ADVERTISEMENT

ಸಾಲ ತೀರಿಸಲು ಕೃತ್ಯ: ‘ಗೂಡ್ಸ್ ಆಟೊ ಚಾಲಕನಾಗಿದ್ದ ಫ್ರಾಂಕ್, ಸಾವಿರಾರು ರೂಪಾಯಿ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸದಿದ್ದರಿಂದ ಸಾಲಗಾರರು ಕಿರುಕುಳ ನೀಡುತ್ತಿದ್ದರು. ಅದಕ್ಕಾಗಿ ಸುಲಿಗೆ ಮಾಡಲು ಸಂಚು ರೂಪಿಸಿದ್ದ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಆರೋಪಿಯ ಪತ್ನಿಯ ಅಜ್ಜಿ ಲೂರ್ಡ್‌ಮೇರಿ, ಅಗ್ರಹಾರ ದಾಸರಹಳ್ಳಿಯಲ್ಲಿ ಅಂಗಡಿ ನಡೆಸುತ್ತಿದ್ದರು. ಅದೇ ಅಂಗಡಿಯಲ್ಲಿ ಶ್ರೀನಿವಾಸ್ ಕೆಲಸ ಮಾಡುತ್ತಿದ್ದರು. ಆಗಾಗ ಅಂಗಡಿಗೆ ಹೋಗುತ್ತಿದ್ದ ಫ್ರಾಂಕ್, ಅಜ್ಜಿಯ ಮೈ ಮೇಲೆ ಆಭರಣ ಇರುವುದನ್ನು ನೋಡುತ್ತಿದ್ದ. ಆಭರಣಗಳನ್ನು ಸುಲಿಗೆ ಮಾಡಿ ಸಾಲ ತೀರಿಸಬೇಕೆಂದು ಅಂದುಕೊಂಡಿದ್ದ’ ಎಂದೂ ತಿಳಿಸಿದರು.

‘ಸಂಬಂಧಿ ಶ್ರೀನಿವಾಸ್‌ನಿಗೆ ಹಣದ ಆಮಿಷವೊಡ್ಡಿದ್ದ ಫ್ರಾಂಕ್, ಸುಲಿಗೆಗೆ ಸಹಾಯ ಕೇಳಿದ್ದ. ಇಬ್ಬರೂ ಗೂಡ್ಸ್ ಆಟೊದಲ್ಲಿ ಅಜ್ಜಿಯನ್ನು ಅಪಹರಿಸಿ ಚಿನ್ನಾಭರಣ ಸುಲಿಗೆ ಮಾಡಿದ್ದರು. ಲಗ್ಗೆರೆ ಬಳಿ ಹೊರವರ್ತುಲ ರಸ್ತೆಯಲ್ಲಿ ಅಜ್ಜಿಯನ್ನು ವಾಹನದಿಂದ ತಳ್ಳಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದು ಪರಾರಿಯಾಗಿದ್ದರು’ ಎಂದೂ ಹೇಳಿದರು.

‘ಆಭರಣ ಮಾರಾಟ ಮಾಡಿದ್ದ ಫ್ರಾಂಕ್, ಬಂದ ಹಣವನ್ನು ಸಾಲಗಾರರಿಗೆ ನೀಡಿದ್ದ. ಕೆಲ ದಿನಗಳ ನಂತರ ತನಗೂ ಪಾಲು ನೀಡುವಂತೆ ಶ್ರೀನಿವಾಸ್ ಒತ್ತಾಯಿಸಿದ್ದ. ಹಣ ನೀಡುವುದಾಗಿ ಹೇಳಿ ಶ್ರೀನಿವಾಸ್‌ ಅವರನ್ನು ಬೇಗೂರು ಬಳಿಯ ನೀಲಗಿರಿ ತೋಪಿಗೆ ಕರೆದೊಯ್ದಿದ್ದ ಫ್ರಾಂಕ್, ಅಲ್ಲಿಯೇ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಎರಡೂ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ದೊರೆತಿದ್ದವು. ಪ್ರಕರಣಗಳ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು’ ಎಂದೂ ಪೊಲೀಸರು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.