ಬೆಂಗಳೂರು: ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ(ಕೆಎಸ್‌ಎಂಡಿಎಂಸಿಎಲ್) ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ‘ಮಾವು ಮತ್ತು ಹಲಸು ಮೇಳ’ಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ‘ರಾಜ್ಯದ ವಿವಿಧ ಭಾಗಗಳಿಂದ ರೈತರು ತಾವು ಬೆಳೆದ ಹಣ್ಣುಗಳನ್ನು ಮೇಳಕ್ಕೆ ತಂದಿದ್ದಾರೆ. ರೈತರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಇಲ್ಲಿದೆ’ ಎಂದರು.
‘ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ವಿವಿಧ ತಳಿಗಳ ಹಲಸಿನ ಹಣ್ಣುಗಳೂ ಮೇಳದಲ್ಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೇಳಕ್ಕೆ ಬಂದು ಹಣ್ಣುಗಳನ್ನು ಖರೀದಿಸಿದರೆ ರೈತರಿಗೂ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
ಮೇಳ ಜೂನ್ 24ರವರೆಗೆ ನಡೆಯಲಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಧಾರವಾಡ, ಕಾರವಾರ, ಹಾವೇರಿ, ತುಮಕೂರು ಜಿಲ್ಲೆಗಳಿಂದ 104 ಮಾವು ಬೆಳೆಗಾರರು ಮೇಳಕ್ಕೆ ಸುಮಾರು 13 ತಳಿಗಳ ಮಾವಿನ ಹಣ್ಣನ್ನು ತಂದಿದ್ದಾರೆ. 16 ರೈತರು ವಿವಿಧ ತಳಿಗಳ ಹಲಸಿನ ಹಣ್ಣುಗಳನ್ನು ತಂದಿದ್ದಾರೆ.
ಭೌಗೋಳಿಕ ಮಾನ್ಯತೆ (ಜಿಐ) ಪಡೆದ ‘ಕರಿಇಶಾಡ್’, ‘ಇಮಾಮ್ ಪಸಂದ್’, ಸವಿ ರುಚಿಯ ‘ರಸಪುರಿ’, ಮಲ್ಲಿಕಾ, ಬಾದಾಮಿ, ಸಕ್ಕರಗುತ್ತಿ, ಕೇಸರ, ಬಂಗನ್ ಪಲ್ಲಿ, ಮಲಗೋವಾ, ಲಾಲ್‌ಬಾಗ್ ಮಧುರ, ಬೈರಸಂದ್ರದಂತಹ ತಳಿಗಳ ಮಾವಿನ ಹಣ್ಣುಗಳು ಪ್ರಮುಖವಾಗಿ ಮೇಳದಲ್ಲಿವೆ.
‘ಮಾವು ಮಾರಾಟಕ್ಕೆ 104 ಮಳಿಗೆಗಳು, ಹಲಸು ಮಾರಾಟಕ್ಕೆ 13 ಮಳಿಗೆಗಳನ್ನು ಮೀಸಲಿಡಲಾಗಿದೆ. ಹುಣಸೆ ಮಾರಾಟ ಮಳಿಗೆಗಳು ಮತ್ತು ಮಾವು ಮತ್ತು ಹಲಸು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟಕ್ಕಾಗಿ 18 ಮಳಿಗೆಗಳನ್ನು ನೀಡಲಾಗಿದೆ’ ಎಂದು ಕೆಎಸ್‌ಎಂಡಿಎಂಸಿಎಲ್ ಅಧ್ಯಕ್ಷ ಸಿ.ಜಿ.ನಾಗರಾಜ್ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ಮತ್ತಿತರರು ಹಾಜರಿದ್ದರು.
ಸೇಂದೂರ ಬಾದಾಮಿ ರಸಪುರಿ ರುಮಾನಿ ಮಲಗೋವಾ ಕೇಸರ್ ತಳಿಗಳಿವೆ. ಒಟ್ಟು 800 ಕೆ.ಜಿ ಹಣ್ಣನ್ನು ತಂದಿದ್ದೇನೆ. ಈ ಬಾರಿ ಫಸಲು ಕಡಿಮೆ ಇದೆ. ಮೇಳದಲ್ಲಿ ಗ್ರಾಹಕರಿಗೆ ಗುಣಮಟ್ಟದ ಮಾವಿನ ಹಣ್ಣು ಸಿಗುತ್ತದೆ. ನೇರವಾಗಿ ರೈತರಿಂದಲೇ ಖರೀದಿ ಮಾಡಬಹುದು.–ಸುನೀಲ್ ರಾಮನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.