ADVERTISEMENT

ಅಂಚೆಯಲ್ಲಿ ಮನೆ ಬಾಗಿಲಿಗೇ ಬರಲಿದೆ ಮಾವು!

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 2:59 IST
Last Updated 1 ಜೂನ್ 2019, 2:59 IST
   

ಬೆಂಗಳೂರು: ಇಲ್ಲಿಯವರೆಗೆ ಅಂಚೆಪತ್ರಗಳನ್ನಷ್ಟೇ ಮನೆಗಳಿಗೆ ತಲುಪಿಸುತ್ತಿದ್ದ ಪೋಸ್ಟ್‌ಮ್ಯಾನ್‌ಗಳು, ಇನ್ನು ಮುಂದೆ ಮಾವಿನ ಹಣ್ಣುಗಳನ್ನೂ ಮನೆ ಬಾಗಿಲಿಗೆ ಹೊತ್ತು ತರಲಿದ್ದಾರೆ!

ಹೌದು, ಇಂಥದ್ದೊಂದು ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆರಂಭಿಸಲಾಗಿದೆ. ಮಾವು ಪ್ರಿಯರು ಆನ್‌ಲೈನ್‌ನಲ್ಲಿ ಬುಕ್‌ ಮಾಡಿದರೆ ಸಾಕು. ತಾಜಾ ಹಣ್ಣುಗಳು ಮನೆಗೇ ಬರಲಿವೆ.

ಈ ಸಂಬಂಧ ‘ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮತ್ತು ಮಾರುಕಟ್ಟೆ ನಿಗಮ’ ಹಾಗೂ ‘ಅಂಚೆ ಇಲಾಖೆ’ ಒಪ್ಪಂದ ಮಾಡಿಕೊಂಡಿದ್ದು, ಪ್ರಸ್ತಾವಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೂ ಸಮ್ಮತಿ ಸೂಚಿಸಿದ್ದಾರೆ.

ADVERTISEMENT

‘ಆರ್ಡರ್‌ ಮಾಡಿದ ಹಣ್ಣುಗಳನ್ನು ವಿತರಿಸಲು ಪ್ರತ್ಯೇಕ ತಂಡ ರಚಿಸಿದ್ದು, ಹಣ್ಣುಗಳನ್ನು ಸಂಗ್ರಹಿಸಿಡಲು ವೇರ್‌ಹೌಸ್‌ ನಿರ್ಮಿಸಿದ್ದೇವೆ. ಈಗಾಗಲೇ ಆನ್‌ಲೈನ್‌ ಬುಕಿಂಗ್‌ ಶುರುವಾಗಿದ್ದು, ಕನಿಷ್ಠ 3 ಕೆ.ಜಿಯಷ್ಟು ಹಣ್ಣುಗಳನ್ನು ಬುಕ್‌ ಮಾಡಲೇಬೇಕು’ ಎಂದುಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೊಬೊ ಹೇಳಿದರು.

‘ಮಾವಿನ ಕಾಯಿಗಳು ಹಣ್ಣಾಗಲು 6–7 ದಿನ ಬೇಕಾಗುತ್ತವೆ. ಹೀಗಾಗಿ, ರಂಧ್ರಗಳಿಲ್ಲದ ಬಾಕ್ಸ್‌ಗಳಲ್ಲಿ‌ ಕಾಯಿಗಳನ್ನು ಪ್ಯಾಕ್ ಮಾಡುವಂತೆ ರೈತರಿಗೆ ಸೂಚಿಸಿದ್ದೇವೆ. ಹಣ್ಣಾದ ಎರಡು ದಿನಗಳೊಳಗೆ ಗ್ರಾಹಕರಿಗೆ ವಿತರಿಸಲಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ವೆಬ್‌ಸೈಟ್‌ನಲ್ಲಿ ರೈತರ ವಿವರ: ಮಾವು ಬೆಳೆದ ರೈತನ ವಿವರ, ಸ್ಥಳ, ಹಣ್ಣಿನ ತಳಿ, ಬೆಳೆಸಿದ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ನಿಗಮದ ವೆಬ್‌ಸೈಟ್‌ನಲ್ಲಿ‌ ಪ್ರಕಟಿಸಲಾಗಿರುತ್ತದೆ.ಗ್ರಾಹಕರು ತಮಗೆ ಬೇಕಾದ ತಳಿಯ ಹಣ್ಣಿನ ಚಿತ್ರದ ಮೇಲೆ ಕ್ಲಿಕ್‌ ಮಾಡಿ, ಆನ್‌ಲೈನ್‌ನಲ್ಲೇ ಹಣ ಪಾವತಿಸಬೇಕು (ಅಂಚೆ ಶುಲ್ಕವೂ ಸೇರಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.