ADVERTISEMENT

ಅಮ್ಮನಿಗೆ ಕಿಡ್ನಿ ನೀಡಲು ವಿವಾಹವನ್ನೇ ರದ್ದುಪಡಿಸಿದಳು

ಮಣಿಪಾಲ್‌ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 20:24 IST
Last Updated 21 ಆಗಸ್ಟ್ 2019, 20:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಗೆ ಮಗಳೇ ಮೂತ್ರಪಿಂಡ ದಾನ ಮಾಡಿದ್ದು, ಇಲ್ಲಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಶಸ್ವಿಯಾಗಿದೆ.

ಬಾಂಗ್ಲಾದೇಶದ ಶಿಖಾರಾಣಿ ಕಿಡ್ನಿ ಸಮಸ್ಯೆಯಿಂದ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕಿಡ್ನಿ ಕಸಿ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದರು. ಅವರ 30 ವರ್ಷದ ಮಗಳು ಕಿಡ್ನಿ ದಾನ ಮಾಡಲು ನಿರ್ಧರಿಸಿದ್ದರು. ಆದರೆ, ಅವಿವಾಹಿತೆ ಆದ ಕಾರಣ ಆಕೆಯ ಕಿಡ್ನಿ ಪಡೆಯಲು ವೈದ್ಯರು ನಿರಾಕರಿಸಿದ್ದರು. ತಾಯಿಯ ಜೀವ ಉಳಿಯುವುದು ಮುಖ್ಯ ಎಂದು ನಿರ್ಧರಿಸಿದ ಯುವತಿ ಇದಕ್ಕಾಗಿ ನಿಶ್ಚಿತಾರ್ಥ ಹಾಗೂ ಮದುವೆಯನ್ನು ರದ್ದು ಮಾಡಿದರು’ ಎಂದು ಮಣಿಪಾಲ್ ಆಸ್ಪತ್ರೆಯ ಮೂತ್ರಪಿಂಡ ರೋಗತಜ್ಞ ಡಾ.ಸನಕರನ್‌ ಸುಂದರ್‌ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಾಮಾನ್ಯವಾಗಿಅವಿವಾಹಿತ ಯುವತಿಯರು ಮೂತ್ರಪಿಂಡ ದಾನ ಮಾಡುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಆದರೆ, ಭವಿಷ್ಯವನ್ನು ಲೆಕ್ಕಿಸದೇ ಅಮ್ಮನ ಜೀವ ಉಳಿಸಲು ಯುವತಿ ದೃಢವಾಗಿದ್ದಳು. ಹೀಗಾಗಿ ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಈಗ ಇಬ್ಬರ ಆರೋಗ್ಯ ಸುಧಾರಣೆಯಾಗಿದೆ’ ಎಂದು ತಿಳಿಸಿದರು.

ADVERTISEMENT

‘ಕಳೆದ ವರ್ಷದವರೆಗೆ ಭಾರತದಲ್ಲಿ ಅಂಗಾಂಗ ದಾನ ‍‍‍ಪ್ರಮಾಣ ಪ್ರತಿ ದಶಲಕ್ಷ ಜನಸಂಖ್ಯೆಗೆ 0.5ರಷ್ಟಿತ್ತು. ಈ ವರ್ಷ 0.8ಕ್ಕೆ ತಲುಪಿದೆ. ಇಷ್ಟೆಲ್ಲ ಆದರೂ, ಅಮೆರಿಕ, ಚೀನಾ, ಜರ್ಮನಿ, ಆಸ್ಟ್ರೇಲಿಯಾ, ಬ್ರೆಜಿಲ್‌ನಂತಹ ದೇಶಗಳಿಗಿಂತ ನಾವು ಬಹಳ ಹಿಂದಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.