ADVERTISEMENT

ಅಂತರರಾಷ್ಟ್ರೀಯ ಮಹಿಳಾ ದಿನ ಆಚರಣೆ: ಅಂಗಾಂಗ ದಾನದ ಮಹತ್ವ ಸಾರಿದ ಮಹಿಳೆಯರು

ಮಣಿಪಾಲ್ ಆಸ್ಪತ್ರೆಯಿಂದ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 14:43 IST
Last Updated 8 ಮಾರ್ಚ್ 2022, 14:43 IST
ಮಣಿಪಾಲ್ ಆಸ್ಪತ್ರೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ (ಎಡದಿಂದ ಬಲಕ್ಕೆ) ಡಾ.ಪೂಜಾ, ಲಾವಣ್ಯ, ನಂದಿನಿ, ಜಯಂತಿ, ವೇದಾ, ಪಹೆಲ್, ಸವಿತಾ ವಿಪಿನ್, ಡಾ.ರಾಜೀವ್ ಲೋಚನ್, ಡಾ.ಮನೀಶ್ ರೈ, ಡಾ.ಸ್ಮಿತಾ, ಡಾ.ರಾಧಿಕಾ ಹಾಗೂ ಡಾ.ಜಾಹ್ನವಿ ಇದ್ದಾರೆ – ಪ್ರಜಾವಾಣಿ ಚಿತ್ರ
ಮಣಿಪಾಲ್ ಆಸ್ಪತ್ರೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ (ಎಡದಿಂದ ಬಲಕ್ಕೆ) ಡಾ.ಪೂಜಾ, ಲಾವಣ್ಯ, ನಂದಿನಿ, ಜಯಂತಿ, ವೇದಾ, ಪಹೆಲ್, ಸವಿತಾ ವಿಪಿನ್, ಡಾ.ರಾಜೀವ್ ಲೋಚನ್, ಡಾ.ಮನೀಶ್ ರೈ, ಡಾ.ಸ್ಮಿತಾ, ಡಾ.ರಾಧಿಕಾ ಹಾಗೂ ಡಾ.ಜಾಹ್ನವಿ ಇದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ತಮ್ಮವರ ನೋವಿಗೆ ಸ್ಪಂದಿಸುವ ಜತೆಗೆ ಅಂಗಾಂಗ ದಾನ ಮಾಡುವ ಮೂಲಕ ಮರುಜನ್ಮಕ್ಕೆ ನೆರವಾದ ಮಹಿಳೆಯರನ್ನು ಹಳೆ ವಿಮಾನ ನಿಲ್ದಾಣ ರಸ್ತೆ ಬಳಿಯ ‘ಮಣಿಪಾಲ್ ಆಸ್ಪತ್ರೆ’ ವತಿಯಿಂದ ಅಭಿನಂದಿಸಲಾಯಿತು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಆಸ್ಪತ್ರೆಯು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಂಗಾಂಗ ಕಸಿಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಯಕೃತ್ತು ವೈಫಲ್ಯದ ಸಮಸ್ಯೆ ಎದುರಿಸುತ್ತಿದ್ದವರಿಗೆ ಅಂಗಾಂಗ ದಾನ ಮಾಡಿದವರು ತಮ್ಮ ಅನುಭವ ಹಂಚಿಕೊಂಡರೆ, ಕಸಿ ನಡೆಸಿದ ಡಾ. ರಾಜೀವ್ ಲೋಚನ್ ಹಾಗೂ ವೈದ್ಯರ ತಂಡವು ಚಿಕಿತ್ಸೆ ವೇಳೆಯ ಸವಾಲುಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟಿ ಸೋನಿಕಾ ಗೌಡ, ‘ಕುಟುಂಬವನ್ನು ಸಮರ್ಥವಾಗಿ ನಿರ್ವಹಿಸುವ ಮಹಿಳೆಯರು, ತಮ್ಮವರಿಗಾಗಿ ಹಲವಾರು ತ್ಯಾಗ ಮಾಡುತ್ತಾರೆ. ಆದರೆ, ಇದನ್ನು ಗುರುತಿಸಿ, ಮೆಚ್ಚುಗೆ ವ್ಯಕ್ತಪಡಿಸುವುದು ಕಡಿಮೆ. ಬದಲಾದ ಕಾಲದಲ್ಲಿ ಮಹಿಳೆಯರು ಅಡುಗೆ ಮನೆಗಳಿಗೆ ಸೀಮಿತವಾಗಿಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಯಕೃತ್ತು ಸಮಸ್ಯೆ ಎದುರಿಸುತ್ತಿದ್ದ ಬಾಲಕಿ ಪಹಲ್‌ಗೆ ತಾಯಿ ಚಂಚಲ್, ಬಾಲಕ ಅದ್ವಿತ್‌ಗೆತಾಯಿ ಲಾವಣ್ಯಅವರು ಯಕೃತ್ತು ದಾನ ಮಾಡಿದ್ದಾರೆ. ವೇದಾ ಅವರು ತಂದೆ ರಘು ಅವರಿಗೆ ಯಕೃತ್ತು ದಾನ ಮಾಡುವ ಮೂಲಕ ಚೇತರಿಕೆಗೆ ನೆರವಾಗಿದ್ದಾರೆ. ಯಕೃತ್ತು ಸಮಸ್ಯೆ ಎದುರಿಸುತ್ತಿದ್ದ ನಂದಿನಿ ಅವರಿಗೆ ಜೀವಸಾರ್ಥಕತೆ ಯೋಜನೆಯಡಿ ಅಂಗ ಕಸಿ ಮಾಡಲಾಗಿದೆ.

ಅಂಗಾಂಗ ದಾನ ಹೆಚ್ಚಲಿ:ನಿರ್ದಿಷ್ಟ ಪ್ರಕರಣಗಳು ಹಾಗೂ ಯಕೃತ್ತು ಕಸಿಯ ಬಗ್ಗೆ ವಿವರಿಸಿದಡಾ.ರಾಜೀವ್ ಲೋಚನ್, ‘ಯಕೃತ್ತು ವೈಫಲ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಕಸಿ ಮರುಜನ್ಮ ನೀಡಲಿದೆ. ಈ ಕಸಿ ಚಿಕಿತ್ಸೆ ಸಂಕೀರ್ಣ ಪ್ರಕ್ರಿಯೆಯಾಗಿದ್ದು ಒಬ್ಬರಿಂದ ಮಾಡಲು ಸಾಧ್ಯವಾಗದು. ಆಸ್ಪತ್ರೆಯಲ್ಲಿನ ವಿವಿಧ ವಿಭಾಗಗಳ ತಜ್ಞರ ನೆರವಿನಿಂದ ಯಶಸ್ವಿಯಾಗಿ ಕಸಿಗಳನ್ನು ನಡೆಸಲಾಗುತ್ತಿದೆ.ಅಂಗಾಂಗಗಳ ದಾನ ಹೆಚ್ಚಾಗಬೇಕು. ಹಲವಾರು ಮಂದಿ ಅಂಗಾಂಗಕ್ಕಾಗಿ ಎದುರು ನೋಡುತ್ತಿದ್ದಾರೆ. ಮಿದುಳು ನಿಷ್ಕ್ರಿಯಗೊಂಡ ಬಳಿಕ ಅಂಗಾಂಗಗಳನ್ನು ಸಂಗ್ರಹಿಸಲಾಗುತ್ತದೆ. ಜೀವಸಾರ್ಥಕತೆ ಸಂಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದರು.

ಆಸ್ಪತ್ರೆಯ ವೈದ್ಯರಾದಡಾ. ಸ್ಮಿತಾ ಪಂಚೋಲಿಯಾ, ಡಾ. ಜಾಹ್ನವಿ, ಡಾ. ರಾಧಿಕಾ ಮತ್ತು ಡಾ. ಪೂಜಾ ಅವರು ಯಕೃತ್ತು ಕಸಿಯ ಸಂದರ್ಭದಲ್ಲಿ ಅನುಸರಿಸಿದ ಪ್ರಕ್ರಿಯೆಯ ಬಗ್ಗೆ ವಿವರಿಸಿದರು.

ಆಸ್ಪತ್ರೆಯ ನಿರ್ದೇಶಕ ಡಾ. ಮನೀಶ್ ರೈ ಅವರು ವಿಡಿಯೊ ಸಮಾಲೋಚನೆ ವ್ಯವಸ್ಥೆಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.