
ಬೆಂಗಳೂರು: ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಅದರ ಮಹತ್ವ ಸಾರಲು ಇದೇ 8–9ರಂದು ಕುಮಾರ ಕೃಪಾ ರಸ್ತೆಯಲ್ಲಿರುವ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ‘ಮನೋತ್ಸವ’ ಹಮ್ಮಿಕೊಳ್ಳಲಾಗಿದೆ.
ಎರಡು ದಿನಗಳ ಈ ರಾಷ್ಟ್ರೀಯ ಮಾನಸಿಕ ಆರೋಗ್ಯ ಉತ್ಸವವನ್ನು ರೋಹಿಣಿ ನಿಲೇಕಣಿ ಫಿಲಾಂತ್ರೊಪಿಸ್ ಫೌಂಡೇಷನ್, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಸಂಸ್ಥೆ (ಎನ್‌ಸಿಬಿಎಸ್) ಜಂಟಿಯಾಗಿ ಆಯೋಜಿಸಿವೆ. ಮಾನಸಿಕ ಆರೋಗ್ಯ, ಸಂಶೋಧನೆ ಮತ್ತು ಸಮಾಜದ ನಡುವಿನ ಅಂತರ ಕಡಿಮೆ ಮಾಡುವುದು ಈ ಉತ್ಸವದ ಉದ್ದೇಶವಾಗಿದೆ.
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಚಾರಸಂಕಿರಣ, ವಿಷಯ ತಜ್ಞರ ಜತೆಗೆ ಸಂವಾದ ಮತ್ತು ಚರ್ಚೆ, ಕಾರ್ಯಾಗಾರ, ಉಪನ್ಯಾಸ ಸೇರಿ ಹಲವು ಕಾರ್ಯಕ್ರಮಗಳನ್ನು ಉತ್ಸವ ಒಳಗೊಂಡಿದೆ. ಈ ಉತ್ಸವದಲ್ಲಿ ಮಕ್ಕಳು ಸೇರಿ ಎಲ್ಲ ವಯೋಮಾನದವರು ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳು, ಪಾಲಕರು, ವೈದ್ಯರು, ಮಾನಸಿಕ ಆರೋಗ್ಯ ತಜ್ಞರು, ಸಂಶೋಧಕರು, ಕಲಾವಿದರು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳನ್ನು ಒಂದೇ ಸೂರಿನಡಿ ತರಲು ಈ ಉತ್ಸವ ಸಹಕಾರಿಯಾಗಲಿದೆ.
ಮುಕ್ತ ಅವಕಾಶ: ದೈನಂದಿನ ಜೀವನದಲ್ಲಿ ಮಾನಸಿಕ ಸ್ವಾಸ್ಥ್ಯದ ಪ್ರಾಮುಖ್ಯತೆ ತಿಳಿಸಿಕೊಡುವ ಜತೆಗೆ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಜ್ಞರ ಮಾರ್ಗದರ್ಶನ ಉತ್ಸವದಲ್ಲಿ ದೊರೆಯಲಿದೆ. ಎರಡೂ ದಿನ ಬೆಳಿಗ್ಗೆ 10 ಗಂಟೆಯಿಂದ ನಡೆಯುವ ಈ ಉತ್ಸವಕ್ಕೆ, ಪ್ರವೇಶ ಉಚಿತ ಇರಲಿದೆ.
ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕಾಗಿದೆ. ಕೋವಿಡ್ ಕಾಣಿಸಿಕೊಂಡ ಬಳಿಕ ಮಾನಸಿಕ ಅನಾರೋಗ್ಯ ಸಮಸ್ಯೆ ಹೆಚ್ಚಾಗಿದ್ದು ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸಬೇಕಿದೆರೋಹಿಣಿ ನಿಲೇಕಣಿ, ಫಿಲಾಂತ್ರೊಪಿಸ್ ಫೌಂಡೇಷನ್ ಅಧ್ಯಕ್ಷೆ
‘ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಲು ನಿಮ್ಹಾನ್ಸ್ ಮತ್ತು ಎನ್‌ಸಿಬಿಎಸ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಒಪ್ಪಂದದ ಭಾಗವಾಗಿ ಮನೋತ್ಸವ ಹಮ್ಮಿಕೊಂಡಿದ್ದೇವೆ. ಜನಸಾಮಾನ್ಯರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಈ ಉತ್ಸವ ಸಹಕಾರಿಯಾಗಲಿದೆ’ ಎಂದು ಫೌಂಡೇಷನ್‌ನ ಸಂಸ್ಥಾಪಕಿ ರೋಹಿಣಿ ನಿಲೇಕಣಿ ತಿಳಿಸಿದರು.
ಇಂದಿಗೂ ಮಾನಸಿಕ ಅನಾರೋಗ್ಯ ಸಮಸ್ಯೆ ಇರುವವರನ್ನು ಕೀಳಾಗಿ ಕಾಣುವ ಜತೆಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಅರಿವು ಅಗತ್ಯಪ್ರೊ.ಎಲ್.ಎಸ್. ಶಶಿಧರ್, ಎನ್‌ಸಿಬಿಎಸ್ ನಿರ್ದೇಶಕ
‘ಮಾನಸಿಕ ಅನಾರೋಗ್ಯ ಸಮಸ್ಯೆ ಕಳಂಕವೆಂಬ ಭಾವನೆಯಿಂದ ಎಲ್ಲರೂ ಮುಕ್ತವಾಗಿ ಹೇಳಿಕೊಳ್ಳುವುದಿಲ್ಲ. ದೈಹಿಕ ಅನಾರೋಗ್ಯ ಸಮಸ್ಯೆಗಳಂತೆ ಮಾನಸಿಕ ಅನಾರೋಗ್ಯ ಸಮಸ್ಯೆಗಳೂ ವ್ಯಕ್ತಿಯನ್ನು ಜೀವನದುದ್ದಕ್ಕೂ ಕಾಡಲಿದೆ. ಸ್ನೇಹಿತರು, ಕುಟುಂಬಸ್ಥರು, ಸಮಾಲೋಚಕರ ಜತೆಗೆ ಈ ಬಗ್ಗೆ ಮಾತನಾಡಿದಾಗ ಮಾತ್ರ ಸಮಸ್ಯೆಯಿಂದ ಹೊರಬರಲು ಸಾಧ್ಯ’ ಎಂದು ಎನ್‌ಸಿಬಿಎಸ್ ನಿರ್ದೇಶಕ ಪ್ರೊ.ಎಲ್.ಎಸ್. ಶಶಿಧರ್ ಅಭಿಪ್ರಾಯಪಟ್ಟರು.
ನೋಂದಣಿಗೆ: https://luma.com/manotsavaindia