ADVERTISEMENT

‘ಒಂದೂವರೆ ವರ್ಷದಲ್ಲಿ ಮನೆ ಹಸ್ತಾಂತರಿಸಿ’

ಮಂತ್ರಿ ಡೆವಲಪರ್ಸ್‌ ಯೋಜನೆಗೆ ‘ಸ್ವಾಮಿ’ ಹೂಡಿಕೆ ನಿಧಿಯಡಿ ನೆರವು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 19:49 IST
Last Updated 9 ಅಕ್ಟೋಬರ್ 2020, 19:49 IST

ಬೆಂಗಳೂರು: ‘ಸುಮಾರು 3000ಕ್ಕೂ ಹೆಚ್ಚು ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಸ್ವಾಮಿ ಹೂಡಿಕೆ ನಿಧಿಯಡಿ (ಎಸ್‌ಡಬ್ಲ್ಯುಎಎಂಐಎಚ್‌) ಮಂತ್ರಿ ಸೆರೆನಿಟಿ ಯೋಜನೆಗೆ ನೆರವು ನೀಡಲಾಗಿದೆ. ಮುಂದಿನ 12ರಿಂದ 18 ತಿಂಗಳಲ್ಲಿ ಖರೀದಿದಾರರಿಗೆ ಮನೆಗಳನ್ನು ಹಸ್ತಾಂತರಿಸಬೇಕು’ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಮಂತ್ರಿ ಡೆವಲಪರ್ಸ್‌ ಮಾಲೀಕರು ಮತ್ತು ಬ್ಯಾಂಕ್‌ನ ಅಧಿಕಾರಿಗಳೊಂದಿಗೆ ಶುಕ್ರವಾರ ಆನ್‌ಲೈನ್‌ನಲ್ಲಿ ಮಾತನಾಡಿದ ಅವರು, ‘ನನ್ನ ಕಚೇರಿಗೆ ಮನೆ ಖರೀದಿದಾರರು ಹಲವು ಬಾರಿ ಭೇಟಿ ನೀಡಿ ಮನವಿ ಮಾಡಿದ್ದಾರೆ. ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಗಿರುವುದರಿಂದ ಗ್ರಾಹಕರಿಗೆ ತೊಂದರೆಯಾಗಿದೆ. ಈಗಾಗಲೇ ಹಣ ನೀಡಿದವರಿಗೆ ಮನೆಗಳನ್ನು ಹಸ್ತಾಂತರಿಸುವ ಕೆಲಸ ಬೇಗ ಆಗಬೇಕು’ ಎಂದರು.

‘ಮೂರು ಸಾವಿರ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು, ಈ ಯೋಜನೆಗೆ ಮುಕ್ತಾಯಕ್ಕಾಗಿ ಸ್ವಾಮಿ ನಿಧಿಯನ್ನು ಮಂಜೂರು ಮಾಡುವಂತೆ ಎಸ್‌ಬಿಐಕ್ಯಾಪ್ ವೆಂಚರ್ಸ್‌ನ ಅಧಿಕಾರಿಗಳು ಹಾಗೂ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರ ಬಳಿ ಮನವಿ ಮಾಡಿದ್ದೆ’ ಎಂದರು.

ADVERTISEMENT

ಮಂತ್ರಿ ಡೆವೆಲಪರ್ಸ್‌ನ ಮುಖ್ಯಸ್ಥ ಸುಶೀಲ್‌ ಮಂತ್ರಿ, ‘ಸ್ವಾಮಿ ಹೂಡಿಕೆ ನಿಧಿಯಡಿಯಲ್ಲಿ ಮೊದಲ ಕಂಪನಿಯಾಗಿ ಮಂತ್ರಿ ಡೆವಲಪರ್ಸ್‌ಗೆ ಹಣ ಬಿಡುಗಡೆ ಮಾಡಿರುವುದು ಸಂತಸ ತಂದಿದೆ. ಬಾಕಿ ಇರುವ ಕೆಲಸ–ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಮುಂದಿನ 12ರಿಂದ 24 ತಿಂಗಳಲ್ಲಿ ಹಂತ–ಹಂತವಾಗಿ ಗ್ರಾಹಕರಿಗೆ ಮನೆಗಳನ್ನು ವಿತರಿಸುತ್ತೇವೆ’ ಎಂದು ಹೇಳಿದರು.

ಎಸ್‌ಬಿಐಕ್ಯಾಪ್‌ ವೆಂಚರ್ಸ್ ಸ್ವಾಮಿ ನಿಧಿಯ ಮುಖ್ಯ ಹೂಡಿಕೆ ಅಧಿಕಾರಿ ಇರ್ಫಾನ್‌ ಖಾಜಿ, ‘ಕೈಗೆಟಕುವ ದರದಲ್ಲಿ, ಮಧ್ಯಮ ವರ್ಗದ ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲು ಸಹಾಯವಾಗಲು ಈ ನಿಧಿ ನೀಡಲಾಗುತ್ತದೆ. ಯೋಜನೆಯ ಕೊನೆಯ ಹಂತದ ನಿಧಿಯನ್ನು ಒದಗಿಸಲಾಗುತ್ತದೆ.ಬೆಂಗಳೂರಿನ ಹಲವು ಯೋಜನೆಗಳಲ್ಲಿ ಸಂಪೂರ್ಣ ನಿರ್ಮಾಣಕ್ಕೆ ಹಣ ಹೂಡಿಕೆ ಮಾಡುತ್ತಿರುವ ಮೊದಲ ಯೋಜನೆ ಇದಾಗಲಿದೆ’ ಎಂದರು.

ಕನಕಪುರ ಮುಖ್ಯರಸ್ತೆಯಲ್ಲಿ ‘ಮಂತ್ರಿ ಸೆರೆನಿಟಿ’ ಯೋಜನೆಯಡಿ 3 ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮನೆ ಖರೀದಿಗೆ ಹಣ ನೀಡಿ ಹಲವು ವರ್ಷಗಳೇ ಕಳೆದರೂ ಮನೆ ಹಸ್ತಾಂತರಿಸದ ಬಗ್ಗೆ ಹಲವು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಧಾನಮಂತ್ರಿ ಸಚಿವಾಲಯಕ್ಕೂ ಈ ಕುರಿತು ಪತ್ರ ಬರೆದಿದ್ದರು. ಗಡುವಿನೊಳಗೆ ಮನೆ ನೀಡದ ಮಂತ್ರಿ ಡೆವಲಪರ್ಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೇರಾಗೂ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.