
ಬೆಂಗಳೂರು: ಕೊಳೆಗೇರಿ ಅಭಿವೃದ್ಧಿ ಮಂಡಳಿಯು ವಸತಿರಹಿತರಿಗಾಗಿ ಮಾರತ್ತಹಳ್ಳಿಯಲ್ಲಿ ನಿರ್ಮಿಸುತ್ತಿರುವ ಸಮುಚ್ಚಯದ ಅಂತಿಮ ಹಂತದ ಕಾಮಗಾರಿ ಆರು ತಿಂಗಳಿನಿಂದ ಸ್ಥಗಿತಗೊಂಡಿದೆ. ಇದರಿಂದ ಪುಟ್ಟದೊಂದು ಬೆಚ್ಚನೆಯ ಮನೆ ಹೊಂದಬೇಕೆಂಬ ಕೊಳೆಗೇರಿ ವಾಸಿಗಳ ಕನಸು, ನನಸಾಗುವ ದಿನ ಮುಂದಕ್ಕೆ ಹೋಗುತ್ತಲೇ ಇದೆ.
ನಗರದ ಚಲ್ಲಘಟ್ಟ, ತಿಪ್ಪಸಂದ್ರದ ಕೃಷ್ಣಪ್ಪ ಗಾರ್ಡನ್, ಪುಲಕೇಶಿನಗರದ ನೆಹರೂ ಕೊಳೆಗೇರಿಗಳ 924 ಕುಟುಂಬಗಳಿಗಾಗಿ ಸಮುಚ್ಚಯ ನಿರ್ಮಿಸಲಾಗಿದೆ. ಮನೆಗಳ ಹಂಚಿಕೆಯನ್ನೂ ಮಾಡಲಾಗಿದೆ. ಆದರೆ ವಾಸಯೋಗ್ಯಕ್ಕೆ ಅಗತ್ಯವಾಗಿ ಬೇಕಾದ ವಿದ್ಯುತ್ ಸಂಪರ್ಕ, ಒಳಚರಂಡಿ ಕಾಮಗಾರಿಗಳು ಇನ್ನೂ ಬಾಕಿ ಉಳಿದಿವೆ. ‘ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಕಾರ್ಮಿಕರು ಊರುಗಳಿಗೆ ತೆರಳಿದರು. ಅಂದು ನೀತಿ ಸಂಹಿತೆ ಕಾರಣದಿಂದ ಸ್ಥಗಿತಗೊಂಡ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕಾರ್ಮಿಕರ ಕೊರತೆಯಿಂದ ಕೆಲಸ ತ್ವರಿತಗತಿಯಲ್ಲಿ ಮುಗಿಯುತ್ತಿಲ್ಲ’ ಎಂದು ಸಮುಚ್ಚಯ ನಿರ್ಮಾಣದ ಗುತ್ತಿಗೆ ಪಡೆದಿರುವ ದಾಸ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯ ಸಿಬ್ಬಂದಿಯೊಬ್ಬರು ತಿಳಿಸಿದರು.
‘ವಿದ್ಯುತ್ ಕೇಬಲ್ ಅಳವಡಿಸಲು ನೆಲ ಅಗೆದು, ಒಳಚರಂಡಿ ಕೊಳವೆಗಳನ್ನೇ ಒಡೆದು ಹಾಕಿದ್ದಾರೆ. ಅವುಗಳನ್ನು ಮತ್ತೆ ಜೋಡಿಸಬೇಕಿದೆ. ಸಂಪೂರ್ಣ ಕಾಮಗಾರಿ ಮುಗಿಯಲು ಇನ್ನೂ ಆರೇಳು ತಿಂಗಳಾದರೂ ಬೇಕು’ ಎಂದು ಹೇಳಿದರು.
ಕಳ್ಳರ ಕಾಟ: ಈಗಾಗಲೇ ನಿರ್ಮಿಸಿರುವ ಮನೆಗಳಲ್ಲಿ ಅಳವಡಿಸಿರುವ ಕಿಟಕಿ, ಬಾಗಿಲುಗಳ ಚಿಲಕಗಳು, ವೈರ್, ಪ್ಲಗ್ ಪಾಯಿಂಟ್, ಸ್ವಿಚ್‌ಗಳು, ಶೌಚಗೃಹದ ನಲ್ಲಿಗಳನ್ನೂ ಕಳ್ಳಕಾಕರು ಕಿತ್ತುಕೊಂಡು ಹೋಗುತ್ತಿದ್ದಾರೆ. ಸಮುಚ್ಚಯ ಆವರಣದಲ್ಲಿ ಕಳೆ ಸಸ್ಯಗಳು ಚಿಗುರುತ್ತಿವೆ. ಸುತ್ತಲು ಲಂಟಾನದ ಪೊದೆ ಬೆಳೆಯುತ್ತಿದೆ.
ವ್ಯಸನಿಗಳ ಅಡ್ಡೆ: ಕುಡಿತ, ಮಾದಕ ವ್ಯಸನದಂತಹ ದುಶ್ಚಟಗಳನ್ನು ತೀರಿಸಿಕೊಳ್ಳಲು ದಾರಿತಪ್ಪಿದವರು ನಿರ್ಜನವಾಗಿರುವ ಈ ಸಮುಚ್ಚಯವನ್ನು ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬೀರ್ ಬಾಟಲಿಗಳ ಗಾಜುಗಳು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಕಳಪೆ ಕಾಮಗಾರಿ ಆರೋಪ
‘ಸಮಚ್ಚಯದ ಮಾಳಿಗೆಯ ಅಂಚಿನ ರಚನೆ ಇಳಿಜಾರಾಗಿ ಇಲ್ಲ. ಕಡಿದಾಗಿದೆ. ಇದರಿಂದ ಮಳೆನೀರು ಗೋಡೆಗೆ ಅಂಟಿಕೊಂಡೇ ಇಳಿಯುತ್ತಿದೆ. ಸುಣ್ಣ–ಬಣ್ಣವು ಮಾಸುತ್ತಿದೆ. ಅಲ್ಲದೆ, ಗೋಡೆಗಳ ದೃಢತ್ವಕ್ಕೂ ಧಕ್ಕೆ ಆಗಲಿದೆ’ ಎಂದು ಫಲಾನುಭವಿಯೊಬ್ಬರು ದೂರಿದರು.
‘ಸಣ್ಣ ಸರಳುಗಳನ್ನು ಹಾಕಿ ಸಂಪೂರ್ಣ ಕಾಂಕ್ರಿಟ್‌ನಿಂದಲೇ ಅರ್ಧ ಅಡಿ ದಪ್ಪದ ಗೋಡೆ ಕಟ್ಟಿದ್ದಾರೆ. ಅದೆಷ್ಟು ದಿನ ಬಾಳಿಕೆ ಬರುತ್ತದೋ ಶಿವನೇ ಬಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘2015ರಲ್ಲಿ ಆರಂಭಗೊಂಡ ಈ ಸಮುಚ್ಚಯದ ಕಾಮಗಾರಿ ಇಂದಿಗೂ ಮುಗಿಯದ ಕಾರಣ, ಮೂಲಸೌಕರ್ಯಗಳಿಲ್ಲದ ಸ್ಲಮ್‌ನಲ್ಲೇ ಸಂಕಷ್ಟದ ದಿನಗಳನ್ನು ದೂಡುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡರು.
*
ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಬಾಕಿಯಿದೆ. ಒಂದು ತಿಂಗಳ ಒಳಗೆ ಅದನ್ನು ಮುಗಿಸಿ, ವಾಸಕ್ಕೆ ಅನುವು ಮಾಡಿಕೊಡುತ್ತೇವ
-ಪದ್ಮನಾಭ, ಕಾರ್ಯನಿರ್ವಾಹಕ ಎಂಜಿನಿಯರ್, ಕೊಳೆಗೇರಿ ಮಂಡಳಿ
*
ಅಂಕಿ–ಅಂಶ
924 - ಸಮುಚ್ಚಯದಲ್ಲಿನ ಒಟ್ಟು ಮನೆಗಳು
₹35 ಕೋಟಿ - ಯೋಜನೆಯ ಒಟ್ಟು ವೆಚ್ಚ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.