ADVERTISEMENT

ಮಸೀದಿ ತೆರವು; ಬಿಬಿಎಂಪಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ

500ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 18:55 IST
Last Updated 10 ಜನವರಿ 2020, 18:55 IST

ಬೆಂಗಳೂರು: ನಂದಿನಿ ಲೇಔಟ್ ಬಳಿಯ ಲಕ್ಷ್ಮಿದೇವಿನಗರದ ಕೆಎಸ್‌ಸಿಬಿ ಕ್ವಾರ್ಟರ್ಸ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಮಸೀದಿ ತೆರವುಗೊಳಿಸಲು ಹೋಗಿದ್ದ ಬಿಬಿಎಂಪಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದ್ದು, ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ.

‘ಘಟನೆ ಬಗ್ಗೆ ಬಿಬಿಎಂಪಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಎನ್‌.ಜಿ.ಉಮೇಶ್ ದೂರು ನೀಡಿದ್ದಾರೆ. ಮುಸ್ಲಿಂ ಸಮುದಾಯದ 500ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಮಸೀದ್–ಒ–ಮದರಸಾ ನೂರ್–ಇಲಾಹಿ ಟ್ರಸ್ಟ್ ಅಧ್ಯಕ್ಷರು, ನಕ್ಷೆ ಇಲ್ಲದೇ ಮಸೀದಿ ಕಟ್ಟಡವನ್ನು ಅನಧಿಕೃತವಾಗಿ ನಿರ್ಮಾಣ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಬಿಎಂಪಿ ರಾಜರಾಜೇಶ್ವರಿನಗರದ ಸಹಾಯಕ ಎಂಜಿನಿಯರ್, ಕೆಎಂಸಿ ಕಾಯ್ದೆ ಪ್ರಕಾರ ಮಸೀದಿ ಕಟ್ಟಡವನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದರು. ಈ ಸಂಗತಿಯನ್ನು ಉಮೇಶ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಹ ಸಲ್ಲಿಸಲಾಗಿತ್ತು. ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್, ಮಸೀದಿಯನ್ನು ತೆರವುಗೊಳಿಸಿ ಅದರ ವರದಿಯನ್ನು ಸಲ್ಲಿಸುವಂತೆ ಗಡುವು ನೀಡಿದೆ. ಹೀಗಾಗಿ, ಮಸೀದಿಯನ್ನು ತೆರವು ಮಾಡಲು ಉಮೇಶ್ ಹಾಗೂ ಸಿಬ್ಬಂದಿ ಗುರುವಾರ ಸ್ಥಳಕ್ಕೆ ಹೋಗಿದ್ದರು. ಸ್ಥಳೀಯ ಪೊಲೀಸರು ಭದ್ರತೆ ಒದಗಿಸಿದ್ದರು.’

‘ಜೆಸಿಬಿ ಯಂತ್ರ, ಟ್ರ್ಯಾಕ್ಟರ್ ಸಮೇತ 30 ಕಾರ್ಮಿಕರು ಮಸೀದಿ ತೆರವು ಮಾಡಲು ಮುಂದಾಗಿದ್ದರು. ಅದೇ ಸಂದರ್ಭದಲ್ಲೇ ಮುಸ್ಲಿಂ ಸಮುದಾಯದ 500ಕ್ಕೂ ಹೆಚ್ಚು ಮಂದಿ ಗುಂಪು ಕಟ್ಟಿಕೊಂಡು ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಜಗಳ ತೆಗೆದಿದ್ದರು. ಬಿಬಿಎಂಪಿ ಸಿಬ್ಬಂದಿ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರು’ ಎಂದು ಅಧಿಕಾರಿ ಹೇಳಿದರು.

‘ಅನುಮತಿ ಇಲ್ಲದೇ ಗುಂಪು ಕೂಡುವುದು(ಐಪಿಸಿ 143), ಅಕ್ರಮವಾಗಿ ಗುಂಪುಗೂಡಿದ್ದ (ಐಪಿಸಿ 149), ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ (ಐಪಿಸಿ 353) ಹಾಗೂ ಕಾನೂನು ಬಾಹಿರ ಸಭೆ ನಡೆಸಿದ (ಐಪಿಸಿ 142) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ತೆಗೆಯಲಾದ ಫೋಟೊ ಹಾಗೂ ವಿಡಿಯೊ ಆಧರಿಸಿ ಆರೋಪಿಗಳ ಗುರುತು ಪತ್ತೆ ಮಾಡಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ದೂರಿನ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಸೀದ್–ಒ–ಮದರಸಾ ನೂರ್–ಇಲಾಹಿ ಟ್ರಸ್ಟ್ ಪದಾಧಿಕಾರಿಗಳು ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.