ADVERTISEMENT

ಮಾಸ್ಕ್ ಕಡ್ಡಾಯ, ದಂಡ ಸದ್ಯಕ್ಕಿಲ್ಲ: ತುಷಾರ್ ಗಿರಿನಾಥ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 20:33 IST
Last Updated 8 ಜೂನ್ 2022, 20:33 IST
ತುಷಾರ್ ಗಿರಿನಾಥ್
ತುಷಾರ್ ಗಿರಿನಾಥ್   

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಮಾಸ್ಕ್ ಧರಿಸುವುದು ಮತ್ತು ಅಂತರ ಕಾಯ್ದುಕೊಳ್ಳುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುವುದು. ಆದರೆ, ಮಾಸ್ಕ್ ಧರಿಸದವರಿಗೆ ಸದ್ಯಕ್ಕೆ ದಂಡ ವಿಧಿಸುವುದಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.

ಕೋವಿಡ್‌ ಪ್ರಕರಣಗಳ ಸಂಖ್ಯೆ 300 ದಾಟಿದೆ. ರೋಗ ಲಕ್ಷಣ ಗಂಭೀರವಾಗಿಲ್ಲ, ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳೂ ಹೆಚ್ಚಿಗೆ ಇಲ್ಲ. ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದರು.

‘ಶಾಪಿಂಗ್ ಮಾಲ್, ಹೋಟೆಲ್‌, ರೆಸ್ಟೋರೆಂಟ್‌ ಸೇರಿ ಜನದಟ್ಟಣೆ ಪ್ರದೇಶದಲ್ಲಿ ಮಾಸ್ಕ್ ಧರಿಸಿದವರಿಗೆ ಮಾತ್ರ ಅವಕಾಶ ನೀಡಲು ಪಾಲಿಕೆ ಸೂಚನೆನೀಡಿದೆ. ಪರಿಸ್ಥಿತಿ ಬಿಗಡಾಯಿಸಿದರೆ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಪದ್ಧತಿ ಮತ್ತೆ ಜಾರಿಗೆ ಬರಲಿದೆ’ ಎಂದುಹೇಳಿದರು.

ADVERTISEMENT

‘ನಗರದಲ್ಲಿ ಮಂಕಿ ಪಾಕ್ಸ್‌ (ಮಂಗನ ಸಿಡುಬು) ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ, ರೋಗ ಲಕ್ಷಣಗಳ ಬಗ್ಗೆ ಮಾಹಿತಿ ಪಡೆದು ವಿಶೇಷ ನಿಗಾ ವಹಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಮತ್ತು ಸಿಬ್ಬಂದಿಗೂ ಮಾಹಿತಿ ನೀಡಲಾಗಿದೆ. ರೋಗ ಲಕ್ಷಣ ಕಂಡರೆ ಕೂಡಲೇ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತದೆ’ ಎಂದು ವಿವರಿಸಿದರು.

ಕೋವಿಡ್‌: ನಗರದಲ್ಲಿ 358 ಮಂದಿಗೆ ಸೋಂಕು ದೃಢ
ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ಏರುಗತಿಯಲ್ಲಿವೆ. ಬುಧವಾರ ಒಂದೇ ದಿನ 358 ಮಂದಿ ಕೊರೊನಾ ಸೋಂಕಿತರಾಗಿರುವುದು ದೃಢಪಟ್ಟಿದೆ.

ಮಂಗಳವಾರ 339 ಮಂದಿಗೆ ಸೋಂಕು ದೃಢಪಟ್ಟಿತ್ತು. ಪರೀಕ್ಷೆ ನಡೆಸುವುದನ್ನು ಹೆಚ್ಚಳ ಮಾಡಲಾಗಿದ್ದು, ಪ್ರಕರಣಗಳು ಏರಿಕೆಕಂಡಿವೆ.

ರಾಜ್ಯದ ಏಳು ಜಿಲ್ಲೆಗಳಲ್ಲಿ ಹೊಸದಾಗಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಬೆಂಗಳೂರು ಗ್ರಾಮಾಂತರ 3, ದಕ್ಷಿಣ ಕನ್ನಡ 1, ಧಾರವಾಡ 4, ಹಾವೇರಿ 2, ಮೈಸೂರು 7, ಉಡುಪಿ 1 ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಒಟ್ಟು 376 ಪ್ರಕರಣಗಳು ಕಂಡುಬಂದಿವೆ. 24 ಗಂಟೆಯ ಅವಧಿಯಲ್ಲಿ ಕೋವಿಡ್‌ ಮರಣ ಪ್ರಕರಣ ವರದಿಯಾಗಿಲ್ಲ.

ರಾಜ್ಯದಲ್ಲಿ ಬುಧವಾರ ಆಸ್ಪತ್ರೆಯಿಂದ 231 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಒಂದೇ ದಿನ 23,246 ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯದಲ್ಲಿ 2,623 ಸಕ್ರಿಯ ಪ್ರಕರಣಗಳಿದ್ದರೆ, ಬೆಂಗಳೂರು ನಗರದಲ್ಲೇ 2,526 ಸಕ್ರಿಯ ಪ್ರಕರಣಗಳಿವೆ. ಸೋಂಕಿನ ದೃಢ ಪ್ರಮಾಣವು ಶೇ 1.61ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.