ADVERTISEMENT

‘ಧರ್ಮದ ವಿಕೃತ ಕಲ್ಪನೆ ಅಳಿಸಲು ಮತ್ತೆ ಕಲ್ಯಾಣ’

ಹಿರಿಯ ಕವಿ ಎಚ್.ಎಸ್. ಶಿವಪ್ರಕಾಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 20:15 IST
Last Updated 10 ಆಗಸ್ಟ್ 2019, 20:15 IST
ಕಾರ್ಯಕ್ರಮದಲ್ಲಿ ಕವಿ ಎಚ್.ಎಸ್. ಶಿವಪ್ರಕಾಶ್‌ ಅವರು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಜೊತೆ ಚರ್ಚಿಸಿದರು. ಪ್ರೊ.ತಮಿಳು ಸೆಲ್ವಿ, ಎಚ್.ಎನ್. ನಾಗಮೋಹನ ದಾಸ್‌ ಇದ್ದಾರೆ  ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಕವಿ ಎಚ್.ಎಸ್. ಶಿವಪ್ರಕಾಶ್‌ ಅವರು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಜೊತೆ ಚರ್ಚಿಸಿದರು. ಪ್ರೊ.ತಮಿಳು ಸೆಲ್ವಿ, ಎಚ್.ಎನ್. ನಾಗಮೋಹನ ದಾಸ್‌ ಇದ್ದಾರೆ  ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಧರ್ಮದ ವಿಕೃತ ಪರಿಕಲ್ಪನೆಗಳಿಗೆ ಯುವಸಮೂಹ ಬಲಿಯಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಕಲ್ಯಾಣದ ಅವಶ್ಯಕತೆ ಇದೆ’ ಎಂದು ಕವಿ ಎಚ್.ಎಸ್. ಶಿವಪ್ರಕಾಶ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಸಾಣೇಹಳ್ಳಿಯ ಸಹಮತ ವೇದಿಕೆ ಶನಿವಾರ ಆಯೋಜಿಸಿದ್ದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಜಾತಿ ಆಧಾರಿತ ಆಚಾರ್ಯ ಪರಂಪರೆ ಮತ್ತು ಗುಣ ಆಧಾರಿತ ಗುರು ಪರಂಪರೆ ಇದೆ. ವಚನಗಳು ಗುರು ಪರಂಪರೆಗೆ ಸೇರಿದವು. ಇಲ್ಲಿ ಜಾತಿಗಿಂತ ಗುಣ ಮತ್ತು ಸಾಧನೆಯೇ ಮುಖ್ಯ’ ಎಂದರು.

‘ವಚನಕಾರಲ್ಲಿಯೂ ಭಕ್ತಿ ಅಂಶವಿದೆ. ಆದರೆ ಅದು ಭಿನ್ನವಾದುದು. ತಮಿಳುನಾಡಿನ ಭಕ್ತಿ ದೇಗುಲಗಳ ಭಕ್ತಿ. ಐದು–ಆರನೇ ಶತಮಾನದಲ್ಲಿ ಸಣ್ಣ ಕಟ್ಟಡಗಳಂತಿದ್ದ ದೇವಸ್ಥಾನಗಳು, ನಂತರದ ಕಾಲದಲ್ಲಿ ದೊಡ್ಡ ಶೋಷಕ ಸಂಸ್ಥೆಗಳಾಗಿ ಬೆಳೆದಾಗ, ವಚನಕಾರರು ಈ ದೇಗುಲ ಸಂಸ್ಕೃತಿ ನಿರಾಕರಿಸಿ, ದೇಹವೇ ದೇಗುಲ ಎಂದು ಸಾರಿದರು. ಕಾಯಕ ತತ್ವವನ್ನೇ ಪ್ರಮುಖವಾಗಿ ಪ್ರತಿಪಾದಿಸಿದರು’ ಎಂದರು.

ADVERTISEMENT

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ ದಾಸ್‌, ‘ಜಾತಿ, ಲಿಂಗ, ವರ್ಣ ಭೇದವಿಲ್ಲದ ಸಮ ಸಮಾಜ ನಿರ್ಮಾಣದ ಆಶಯವನ್ನು ವಚನಗಳಲ್ಲಿ ಕಾಣಬಹುದು. ವಚನಗಳ ಈ ತತ್ವವನ್ನೇ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಸಂವಿಧಾನಕ್ಕೆ ಗಂಡಾಂತರ ಉಂಟಾದರೆ, ಅದು ವಚನಗಳಿಗೆ ಎದುರಾದ ಅಪಾಯವೆಂದೇ ಭಾವಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ಎಪ್ಪತ್ತು ವರ್ಷಗಳಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆಯೆಂದರೆ ಅದಕ್ಕೆ ಕಾರಣ ನಮ್ಮ ಸಂವಿಧಾನ. ಆದರೆ ಇಂದು ಬದುಕಿನ ಪ್ರಶ್ನೆಗಳಿಗಿಂತ ಭಾವನಾತ್ಮಕ ಅಂಶಗಳೇ ಆದ್ಯತೆಯಾಗುತ್ತಿವೆ’ ಎಂದರು.

ಪ್ರಾಧ್ಯಾಪಕಿ ಡಾ.ತಮಿಳು ಸೆಲ್ವಿ, ‘ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ರಾಜ್ಯಕ್ಕೆ ಸೀಮಿತಗೊಳಿಸದೆ ದೇಶಕ್ಕೂ ವಿಸ್ತರಿಸಬೇಕು’ ಎಂದು ಅಭಿಪ್ರಾಯಪಟ್ಟರು.

***

ಹಲವೆಡೆ ಜಲಪ್ರಳಯವಾಗಿದೆ. ಸಂತ್ರಸ್ತರಿಗೆ ಎಲ್ಲರೂ ನೆರವು ನೀಡಿದರೆ ಮಾತ್ರವೇ ಮತ್ತೆ ಕಲ್ಯಾಣ ಸಾಧ್ಯ. ನೆರೆ ಪರಿಹಾರಕ್ಕೆ ಮಠದಿಂದ ₹5 ಲಕ್ಷ ನೀಡಲಾಗುವುದು.

- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.