ADVERTISEMENT

ಪ್ರಿಯಾಂಕ್ ಖರ್ಗೆ ದಾಖಲೆ, ಮಾಹಿತಿಗಳನ್ನು ಸಿಐಡಿಗೆ ನೀಡಲಿ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 11:32 IST
Last Updated 25 ಏಪ್ರಿಲ್ 2022, 11:32 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ನಿಷ್ಪಕ್ಷ ತನಿಖೆ ಮುಂದುವರಿಸಲು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು, ತಮ್ಮ ಬಳಿ ಇರುವ ದಾಖಲೆ ಹಾಗೂ ಮಾಹಿತಿಗಳನ್ನು ಸಿಐಡಿಗೆ ಒಪ್ಪಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಕಾನೂನು ಪ್ರಕ್ರಿಯೆಗಳಿಗೆ ಒಳಪಡಿಸಲು ಸಹಕರಿಸಬೇಕು. ತನಿಖೆ ನಿಷ್ಪಕ್ಷವಾಗಿ ನಡೆಯುತ್ತಿದ್ದು, ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಾದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಯಾವುದೇ ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ನಡೆಸದೇ, ಅಕ್ರಮ ಎಸಗಿದವರನ್ನು ಕಾನೂನಿಗೆ ಬಲೆಗೆ ತರಲು ಮುಂದಾಗಬೇಕು ಎಂದು ತಿಳಿಸಿದರು.

ADVERTISEMENT

ಈ ಅಕ್ರಮಕ್ಕೆ ಸಂಬಂಧಿಸಿದಂತೆ ಒಂದು ಆಡಿಯೋ ರೆಕಾರ್ಡ್‌ ಅನ್ನು ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು, ನಾನೇ ಮುಖ್ಯಮಂತ್ರಿಯವರ ಜತೆ ಸಮಾಲೋಚನೆ ನಡೆಸಿ ಸಿಐಡಿ ತನಿಖೆಗೆ ಆದೇಶ ನೀಡಿದ್ದೆ ಎಂದರು.

ಇಂತಹ ಕೃತ್ಯಗಳಿಂದ ಬಡ ಕುಟುಂಬದಿಂದ ಬಂದ ಪ್ರಾಮಾಣಿಕ ಮತ್ತು ಪ್ರತಿಭಾವಂತ ಆಕಾಂಕ್ಷಿಗಳು ಮೂಲೆ ಗುಂಪಾದರೆ ಅದರಿಂದ ಸಮಾಜಕ್ಕೆ ನಷ್ಟ ಆಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.